
ಯಾದಗಿರಿ:ಜ.28: ಜಿಲ್ಲೆಯಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಕಾರ್ಯಕರ್ತ ಶಿವರಾಜ ದಾಸನಕೇರಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಉದ್ಯೋಗದ ಅವಕಾಶಗಳ ವಿಷಯದಲ್ಲಿ ಹಿಂದುಳಿದ ಜಿಲ್ಲೆಯಾಗಿದ್ದು, ಅನೇಕ ಯುವಕರು ವಿದ್ಯಾಭ್ಯಾಸ ಮುಗಿಸಿದರೂ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಅರ್ಹತೆ ಇದ್ದರೂ ಕೂಡ ಉದ್ಯೋಗದ ಅವಕಾಶಗಳು ಸಿಗದೆ ಯುವಕರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿರುವ ಹಾಗೂ ಪಕ್ಕದ ಜಿಲ್ಲೆಗಳ ಖಾಸಗಿ ಕಂಪನಿಗಳಲ್ಲಿ ಕೆಲಸ ಸಿಗುವಂತೆ ಮಾಡುವ ಜವಾಬ್ದಾರಿ ಜಿಲ್ಲಾ ಉದ್ಯೋಗ ಇಲಾಖೆಯದ್ದಾಗಿದೆ. ಆದರೆ ಕಳೆದ ಹಲವು ತಿಂಗಳುಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಉದ್ಯೋಗ ಮೇಳಗಳು ಅಥವಾ ನೇರ ಸಂದರ್ಶನಗಳು ನಡೆದಿಲ್ಲ ಎಂದು ಅವರು ದೂರಿದ್ದಾರೆ.
ಪಕ್ಕದ ಜಿಲ್ಲೆಗಳಾದ ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳು ನಡೆಯುತ್ತಿದ್ದು, ಅಲ್ಲಿನ ಯುವಕರಿಗೆ ಕೆಲಸ ಸಿಗಲು ಅನುಕೂಲವಾಗಿದೆ. ಆದರೆ ಯಾದಗಿರಿಯಲ್ಲಿ ಇಂತಹ ಕಾರ್ಯಕ್ರಮಗಳು ಸಂಪೂರ್ಣ ನಿಂತು ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಉದ್ಯೋಗ ಕಚೇರಿಗೆ ಹೋಗಿ ವಿಚಾರಿಸಿದಾಗ, ಅಧಿಕಾರಿಗಳು ಸುರಪುರ ನಗರಸಭೆಯಲ್ಲಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ಕಾರಣ ಕಚೇರಿಗೆ ಬರುವುದಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಕಚೇರಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎನ್ನಲಾಗಿದೆ.
ಯುವನಿಧಿ ಯೋಜನೆಯ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿಗಳು ಕಚೇರಿಗೆ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಮಾಹಿತಿ ಕೊಡದ ಕಾರಣ ಜನರು ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಯುವನಿಧಿ ಸೌಲಭ್ಯ ಪಡೆಯುವವರಿಗೆ ಕೌಶಲ್ಯ ತರಬೇತಿ ನೀಡಬೇಕೆಂಬ ಸರ್ಕಾರದ ಆದೇಶ ಇದ್ದರೂ, ಅದನ್ನು ಜಾರಿಗೆ ತರುವಲ್ಲಿ ಜಿಲ್ಲಾ ಉದ್ಯೋಗ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಲಾಗಿದೆ.
ಆದ್ದರಿಂದ ಯಾದಗಿರಿ ಜಿಲ್ಲೆಯ ಯುವಕರು ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಕ್ಷಣವೇ ಜಿಲ್ಲಾ ಉದ್ಯೋಗಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಕಚೇರಿಯಲ್ಲಿರುವ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜ ದಾಸನಕೇರಿ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
























