
ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)- ಆ-31:
ಮನುಷ್ಯ ಜೀವನ ಪವಿತ್ರ ಪಾವನ. ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ಅರಿತು ಬಾಳುವುದರಲ್ಲಿ ಜೀವನದ ಉತ್ಕರ್ಷತೆ ಮತ್ತು ಶ್ರೇಯಸ್ಸಿದೆ. ಸುಖ ಶಾಂತಿ ಬದುಕಿಗೆ ಧರ್ಮವೇ ಮೂಲವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರಾವಣ ಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನದಲ್ಲಿ ಮನುಷ್ಯ ಧರ್ಮ ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಆತ್ಮ ಸಾಕ್ಷಿ, ಉತ್ತಮ ಆರೋಗ್ಯ ಹಾಗೂ ಸ್ವಾತಂತ್ರ್ಯ ಇವು ಮೂರು ಸಂತೋಷದ ಮೂಲಗಳು. ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಗುರಿಯಿಲ್ಲದ ಗುರಿ ಸಾಧಿಸದ ಬದುಕು ನಿರರ್ಥಕ. ಸದ್ವಿದ್ಯೆ ಉತ್ತಮ ಸಂಬಂಧ ಆದರ್ಶ ಸ್ನೇಹ ಯಾವಾಗಲೂ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ ಸೂತ್ರದಲ್ಲಿ ನಿರೂಪಿಸಿದ್ದಾರೆ. ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಡಾ|| ವಿಜಯಾನಂದ ಕಾಶಪ್ಪನವರ ಅತ್ಯಂತ ಭಕ್ತಿ ಶ್ರದ್ಧೆಯಿಂದ ಶ್ರಾವಣ ಮಹಾಪೂಜೆಯಲ್ಲಿ ಸಂಪೂರ್ಣ ಪಾಲ್ಗೊಂಡಿರುವುದು ಅವರಲ್ಲಿರುವ ಧರ್ಮ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ರೇಶ್ಮೆ ಮಡಿ ಫಲ ಪುಷ್ಪ ಸ್ಮರಣಿಕೆ ಗ್ರಂಥವಿತ್ತು ಶುಭ ಹಾರೈಸಿದರು.
ಗೌರವ ಸ್ವೀಕರಿಸಿದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಡಾ|| ವಿಜಯಾನಂದ ಕಾಶಪ್ಪನವರ ಮಾತನಾಡಿ ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಯೋಗ್ಯ ಸಂಸ್ಕಾರ ಪಡೆದರೆ ಭವಿಷ್ಯ ಉಜ್ವಲಗೊಳ್ಳುವುದರಲ್ಲಿ ಅನುಮಾನವಿಲ್ಲ. ಲಿಂ. ಎಸ್.ಆರ್.ಕಾಶಪ್ಪನವರ ಅವರಲ್ಲಿ ರಾಜಕೀಯ ಇಚ್ಛಾಶಕ್ತಿ ಇತ್ತು. ಧರ್ಮದಲ್ಲಿ ಇಟ್ಟ ನಂಬಿಕೆ ಬಹಳ ದೊಡ್ಡದಾಗಿತ್ತು. ಅದೇ ದಾರಿಯಲ್ಲಿ ನಡೆಯುತ್ತಿರುವುದು ನನಗೆ ಸಂತೃಪ್ತಿ ಸಮಾಧಾನ ತಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಯಾವಾಗಲೂ ನಮ್ಮ ಮನೆತನದ ಮೇಲಿದೆ. ಇಂದಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದದಿಂದ ನಾನಿಂದು ಮಂತ್ರಿಯಾಗಿ ಜನಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ರಾಜ್ಯದ ಜನರ ಹಿತ ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯ ಕೈಕೊಂಡು ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕಲಾಗುವುದೆಂದ ಅವರು ವೀರಶೈವ ಲಿಂಗಾಯತ ಸಮುದಾಯ ಇನ್ನುಳಿದ ಎಲ್ಲಾ ಸಮುದಾಯದ ಜನರನ್ನು ಸಮಾನತೆ ಸಾಮರಸ್ಯದತ್ತ ಕರೆತರುವ ಜವಾಬ್ದಾರಿ ಇದೆ. ಶ್ರೀ ರಂಭಾಪುರಿ ಪೀಠದ ಅಭಿವೃದ್ಧಿ ಪರವಾದ ಕಾರ್ಯಗಳಿಗೆ ಸ್ಪಂದಿಸಿ ಕಾರ್ಯ ಮಾಡುತ್ತೇನೆಂದು ಆದಿ ಜಗದ್ಗುರು ರೇಣುಕಾಚಾರ್ಯರ ಸಾಕ್ಷಿಯಾಗಿ ಹೇಳುವೆ ಎಂದರು.
ಸಚಿವರ ತಾಯಿ ಮಾಜಿ ಶಾಸಕಿ ಶ್ರೀಮತಿ ಗೌರಮ್ಮ ಕಾಶಪ್ಪನವರು, ಪತ್ನಿ ಶ್ರೀಮತಿ ವೀಣಾ ಕಾಶಪ್ಪನವರ ಕಾಂಗ್ರೆಸ್ ಯುವ ಧುರೀಣ ಸೋಮು ಗಣಾಚಾರಿ, ಅ.ಭಾ.ವೀ.ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ, ಬೆಂಗಳೂರು ಮಾಜಿ ಮಹಾಪೌರ ಪುಟ್ಟರಾಜು, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ, ಎಂ.ಕೊಟ್ರೇಶಪ್ಪ, ವಿರೂಪಾಕ್ಷಪ್ಪ ಮಲ್ಲಜ್ಜರ ಮೊದಲಾದ ಗಣ್ಯರು ಪಾಲ್ಗೊಂಡು ಗುರುರಕ್ಷೆ ಸ್ವೀಕರಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.






























