
ಸೈದಾಪುರ:ಜ.20:ಯೋಗಿ ವೇಮನರು ಲೋಕಸಂಚಾರಿಯಾಗಿ ಜನರ ಬದುಕನ್ನು ಕಂಡು ಕವಿತೆಗಳನ್ನು ರಚಿಸಿದರು. ಅದಕ್ಕಾಗಿಯೆ ಅವರ ಕಾವ್ಯದಲ್ಲಿ ಸತ್ವವಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜನಸಾಮಾನ್ಯರ ಕವಿಯಾದ ವೇಮನ ಜಾತೀಯತೆ, ಅಂಧ ಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಕಾವ್ಯದ ಮೂಲಕ ಧಿಕ್ಕರಿಸಿದವರು. ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದು ಅಪೂರ್ವ ಸಮಾಜ ಸುಧಾರಕರಾದರು. ಅವರ ವಿಚಾರಧಾರೆಗಳನ್ನು ಜಯಂತಿಯ ಮೂಲಕ ತಿಳಿಯುವ ಪ್ರಯತ್ನ ಮಾಡೋಣ ಎಂದು ಹೇಳಿದರು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ಸಾಬಯ್ಯ ರಾಯಪ್ಪನೋರ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ರಾಜಶೇಖರ ಪಾಟೀಲ, ಸತೀಶ ಪುರ್ಮಾಂ, ಶಿವಕುಮಾರ ಬಂಡಿ, ಸಂಗಾರೆಡ್ಡಿ ಸೇರಿದಂತೆ ಇತರರಿದ್ದರು.
























