
ಬೀದರ್: ಯುವಜನರು ನಿರಂತರವಾಗಿ ನಾಟಕ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವು ಜೀವಂತವಾಗಿ ಉಳಿಯಲು ಸಾಧ್ಯವಿದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷನ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ ಶಟಕಾರ ಹೇಳಿದರು.
ಗುರುವಾರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ರಾಷ್ಟ್ರೀಯ ನಾಟಕ ಶಾಲೆ, ಕರ್ನಾಟಕ ಸಾಹಿತ್ಯ ಸಂಘಗಳ ಸಹಯೋಗದಲ್ಲಿ ಜರುಗಿದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ 40 ದಿನಗಳ ನಾಟಕೋತ್ಸವ ತರಬೇತಿಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ನಾಟಕ ಕಲೆಯು ನಶಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ವಿದ್ಯಾರ್ಥಿಗಳಿಗೆ ತಮ್ಮ ಕಲೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಸಂಘಟಕರ ಕಾರ್ಯ ಶ್ಲಾಘಿಸಿದರು.
ಹಿಂದೆ ಎಲ್ಲಾ ಜಿಲ್ಲೆಗಳಲ್ಲೂ ನಾಟಕ ಕ್ಷೇತ್ರವು ಸಕ್ರಿಯವಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಅದು ಮಾಯವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿz ಅವರು, ಸಿನಿಮಾಗಳನ್ನು ನೋಡುವುದಕ್ಕೂ ಹಾಗೂ ವೇದಿಕೆಯ ಮೇಲಿನ ನಾಟಕದ ಅಭಿನಯವನ್ನು ನೋಡುವುದಕ್ಕೂ ಬಹಳ ವ್ಯತ್ಯಾಸವಿದ್ದು, ಹಿಂದೆಲ್ಲಾ ನಾಟಕಗಳು ಮೂರ್ನಾಲ್ಕು ದಿನಗಳ ಕಾಲ ಪ್ರದರ್ಶನಗೊಳ್ಳುತ್ತಿದ್ದವು ಎಂದು ಅವರು ಸ್ಮರಿಸಿದರು.
ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ಈ ವೇದಿಕೆಯು ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಶಟಕಾರ ಮೆಚ್ಚುಗೆ ವ್ಯಕ್ತಪಡಿಸಿದರು.
ವೆಂಕಟೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಉಮಾಕಾಂತ ಪಾಟೀಲ ಮಾತನಾಡಿ, “ಇಡೀ ಜಗತ್ತೇ ಒಂದು ರಂಗಮಂಚ, ನಾವೆಲ್ಲರೂ ನಮ್ಮದೇ ಆದ ಪಾತ್ರಗಳನ್ನು ನಿರ್ವಹಿಸುವ ನಟರು.” ದೇವರು ನಮಗೆ ಶಿಕ್ಷಕ, ವೈದ್ಯ, ವಕೀಲ ಹೀಗೆ ನಾನಾ ಪಾತ್ರಗಳನ್ನು ನೀಡಿದ್ದು, ಆ ಪಾತ್ರಗಳನ್ನು ಸಮಾಜದ ಒಳಿತಿಗಾಗಿ ಧನಾತ್ಮಕವಾಗಿ ನಿರ್ವಹಿಸಬೇಕೇ ವಿನಃ ಇತರರಿಗೆ ಹಾನಿ ಮಾಡುವ ನಕಾರಾತ್ಮಕ ಉದ್ದೇಶದಿಂದಲ್ಲ ಎಂದು ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಶಾಂತಕುಮಾರ ಪಾಟೀಲ ಮಾತನಾಡಿ, ನಾಟಕ, ಸಾಹಿತ್ಯ ಮತ್ತು ಸಂಗೀತದಂತಹ ಸಾಂಸ್ಕೃತಿಕ ಕಲೆಗಳು ಮಾನಸಿಕ ಆರೋಗ್ಯವನ್ನು ಕಾಪಾಡಲು ಹಾಗೂ ಸಮಾಜವನ್ನು ಸಂತೋಲನದಲ್ಲಿಡಲು ಸಹಾಯ ಮಾಡುತ್ತವೆ.ಪ್ರಸ್ತುತ ದಿನಗಳಲ್ಲಿ ಸಿನಿಮಾ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ರಂಗಭೂಮಿ ಕಲೆಯು ನಶಿಸಿ ಹೋಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ರಾಜೇಂದ್ರ ಬಿರಾದಾರ ಮಾತನಾಡಿ, ರಂಗಭೂಮಿ ಎದುರಿಸುತ್ತಿರುವ ಸವಾಲುಗಳು: ಸ್ಮಾಟ್ರ್ಫೋನ್, ಆಧುನಿಕ ಟೆಲಿವಿಷನ್ ಮತ್ತು ತಂತ್ರಜ್ಞಾನದ ಅಬ್ಬರದಿಂದಾಗಿ ನಾಟಕಗಳಿಗೆ ಪ್ರೇಕ್ಷಕರ ಕೊರತೆ ಎದುರಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಆರ್ಥಿಕ ನಿರ್ವಹಣೆಯ ಕೊರತೆಯಿಂದಾಗಿ ನಾಟಕ ಕಂಪನಿಗಳು ಮುಚ್ಚಿಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಪೆÇ್ರ.ಜಗನ್ನಾಥ ಹೆಬ್ಬಾಳೆ ಮಾತನಾಡಿ, ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಎನ್ಎಸ್ಡಿ ವತಿಯಿಂದ ದೇಶಾದ್ಯಂತ ಕೇವಲ 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಈ ಪ್ರತಿಷ್ಠಿತ ಯೋಜನೆಯನ್ನು ಡಾ. ರಾಜಕುಮಾರ್ ಹೆಬ್ಬಾಳೆ ಅವರ ವಿಶೇಷ ಪ್ರಯತ್ನದ ಮೇರೆಗೆ ಬೀದರ್ಗೆ ತರಲಾಗಿದ್ದು, ಸೆಪ್ಟೆಂಬರ್ 11ರಿಂದ ಕರ್ನಾಟಕ ಕಾಲೇಜಿನಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕದ ಏಕೈಕ ಎನ್ಎಸ್ಡಿ ಪದವೀಧರರಾದ ಬೀದರ್ನ ಮಹೇಶ್ ವಿ. ಪಾಟೀಲ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸುಮಾರು 40 ದಿನಗಳ ಕಾಲ ವಿದ್ಯಾರ್ಥಿಗಳಿಗೆ ನಟನಾ ತರಬೇತಿ ನೀಡಿ ಈ ನಾಟಕ ನಿರ್ದೇಶಿಸಿದ್ದಾರೆ ಕವಿ ಡಾ. ಸಿದ್ದಲಿಂಗಯ್ಯ ಅವರ ‘ಕತ್ತೆ ಮತ್ತು ಧರ್ಮ’ ಎಂಬ ಕೃತಿಯನ್ನು ಆಧರಿಸಿ ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ಶೀರ್ಷಿಕೆಯಡಿ ಈ ನಾಟಕ ಸಿದ್ಧಪಡಿಸಲಾಗಿದೆ ಎಂದರು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಸೋಮನಾಥ ಬಿರಾದಾರ, ಕರ್ನಾಟಕ ಸಾಹಿತ್ಯ ಸಂಘದ ನಿರ್ದೇಶಕ ಜಗನ್ನಾಥ ಪಾರಾ, ಓಂ ಸಿದ್ದಿ ವಿನಾಯಕ ಕಾಲೇಜಿನ ಪ್ರಾಚಾರ್ಯ ಸಿದ್ರಾಮ ಬಿಚಕುಂದೆ ವೇದಿಕೆಯಲ್ಲಿದ್ದರು.
ಇದೇ ವೇಳೆ 40 ದಿನಗಳ ಕಾಲ ತರಬೇತಿ ನೀಡಿದ ರಂಗಕರ್ಮಿ ಮಹೇಶ ಪಾಟೀಲ ಹಾಗೂ ಜಿಲ್ಲೆಯ ಈ ತರಬೇತಿ ತರುವಲ್ಲಿ ಯಶಸ್ಸು ಕಂಡ ಡಾ.ರಾಜಕುಮಾರ ಹೆಬ್ಬಾಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೀದರ್ ತಾಲೂಕಾಧ್ಯಕ್ಷ ಎಸ್.ಬಿ ಕುಚಬಾಳ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸುನಿತಾ ಕೂಡ್ಲಿಕರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅಂಬಿಕಾ ಬಿರಾದಾರ ವಂದಿಸಿದರು. ನಂತರ ಒಂದುವರೆ ಗಂಟೆಗೂ ಅಧಿಕ ಸಮಯದ ವರೆಗೆ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ನಾಟಕ ಪ್ರದರ್ಶನಗೊಂಡಿತ್ತು.























