
ಕೊರಟಗೆರೆ, ಜ. ೨೪- ರಥಸಪ್ತಮಿಯಂದು ನಡೆಯುವ ಐತಿಹಾಸಿಕ ಇತಿಹಾಸ ಪ್ರಸಿದ್ಧ ಶ್ರೀಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲು ಮಕರ ಸಂಕ್ರಾತಿ ಹಬ್ಬದ ಮಾರನೇ ದಿನದಿಂದ ಆರಂಭಗೊಳ್ಳುವ ರಾಸುಗಳ ಜಾತ್ರೆಗೆ ರಾಜ್ಯದ ಅನೇಕ ಭಾಗದ ರೈತರ ವಿವಿಧ ತಳಿಯ ರಾಸುಗಳು ಆಗಮಿಸುತ್ತಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಸಡಗರ ಮನೆ ಮಾಡಿತ್ತು.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ಪ್ರತಿ ವರ್ಷ ರಥಸಪ್ತಮಿಯಂದು ನಡೆಯುವ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ ೧೫ ದಿನಗಳ ಮೊದಲೇ ಪ್ರಾರಂಭವಾಗುವ ಈ ರಾಸುಗಳ ಜಾತ್ರೆಗೆ ಈ ಬಾರಿ ವಿವಿಧ ತಳಿಯ ರಾಸುಗಳು ಹೆಚ್ಚಾಗಿ ಆಗಮಿಸುತ್ತಿದ್ದು ರೈತರನ್ನು ಆಕರ್ಷಿಸುತ್ತಿವೆ.
ಈ ವರ್ಷದ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನ ೫೦ ಸಾವಿರದಿಂದ ೫ ಲಕ್ಷದವರೆಗೆ ರೈತರು ಖರೀದಿಸುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳನ್ನು ಹೆಚ್ಚಿನ ಡಿಮ್ಯಾಂಡ್ ಇದ್ದು, ರಾಜ್ಯದ ಬಳ್ಳಾರಿ, ಹಾವೇರಿ, ಶಿವಮೊಗ್ಗ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ರೈತರು ಹೆಚ್ಚಾಗಿ ಆಗಮಿಸಿ ರಾಸುಗಳ ಖರೀದಿಗೆ ಮುಂದಾಗುತ್ತಿರುವುದು ಕಂಡು ಬಂದಿದ್ದು, ಈ ಜಾತ್ರೆ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಸುಗಳು ವ್ಯಾಪಾರ ಮಂಕಾಗಿದೆ ಎಂದು ಸ್ಥಳೀಯ ರೈತರ ಅಭಿಪ್ರಾಯವಾಗಿದೆ. ಜಾತ್ರೆಯಲ್ಲಿ ದನಗಳ ಬೆಲೆ ದುಬಾರಿಯಾಗಿದೆ ಎಂಬುದು ಹೊರ ಜಿಲ್ಲೆಗಳಿಂದ ಬಂದಿರುವ ರೈತರ ಮಾತಾಗಿದೆ. ಈ ಕಾರಣದಿಂದಾಗಿ ಖರೀದಿದಾರರ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎನ್ನಬಹುದಾಗಿದೆ. ಈ ಭಾಗದ ಹಳ್ಳಿಕಾರ್ ತಳಿಯ ದನಗಳಿಗೆ ಹೆಚ್ಚಿನ ಮಹತ್ವ ಇದೆ. ಜತೆಗೆ ಅಮೃತಮಹಲ್ ಜಾತಿಯ ದನಗಳ ತಳಿಗಳನ್ನು ಸಹ ಇಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹಾಲು ಉತ್ಪಾದನೆಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎಚ್.ಎಫ್ ತಳಿಯ ರಾಸುಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶಿ ತಳಿಗಳಾದ ಹಳ್ಳಿಕಾರ್ ಹಾಗೂ ಅಮೃತಮಹಲ್ ದನಗಳನ್ನು ಸಾಕುವವರ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.
ಹಿಂದೆ ಪ್ರತಿ ಮನೆಯ ಅಂಗಳದಲ್ಲಿ ಹಳ್ಳಿಕಾರ್ ತಳಿ ರಾಸುಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದವು. ಆದರೆ ಈಗ ಆ ಜಾಗದಲ್ಲಿ ಹೈನುಗಾರಿಕೆ ಹಿನ್ನೆಲೆಯಲ್ಲಿ ಎಚ್.ಎಫ್ ತಳಿ ರಾಸುಗಳು ಕಂಡು ಬರುತ್ತಿವೆ. ಇದರಿಂದಾಗಿ ಜಾತ್ರೆಗೆ ಬರುವ ದೇಶಿ ತಳಿಯ ರಾಸುಗಳ ಸಂಖ್ಯೆ ಇಳಿಮುಖವಾಗಿದೆ ಎನ್ನಲಾಗಿದೆ.
ರಾಸುಗಳ ಖರೀದಿಗೆ ಬಂದ ಶಿವಮೊಗ್ಗ ಜಿಲ್ಲೆಯ ರೈತ ಮಂಜಣ್ಣ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಿಂದ ೩೫ ವರ್ಷದಿಂದ ಕ್ಯಾಮೇನಹಳ್ಳಿ ದನಗಳ ಜಾತ್ರೆಗೆ ಆಗಮಿಸಿ ರಾಸುಗಳನ್ನು ಖರೀದಿಸುತ್ತೇವೆ, ಪ್ರತಿ ವರ್ಷಕ್ಕಿಂತ ಈ ವರ್ಷ ರಾಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಾವು ೨ ರಾಸುಗಳನ್ನು ಖರೀದಿ ಮಾಡಿದ್ದೇವೆ ಎಂದು ಹೇಳಿದರು.ದೊಡ್ಡಬಳ್ಳಾಪುರ ರೈತ ಚಂದ್ರಯ್ಯ ಮಾತನಾಡಿ ಹಳ್ಳಿಕಾರ್ ರಾಸುಗಳ ಮೇಲೆ ನಮಗೆ ಮೊದಲಿನಿಂದಲೂ ವಿಶೇಷ ಒಲವು, ಬೇರೆಯವರು ಖರೀದಿಸಿದ್ದ ಹಳ್ಳಿಕಾರ್ ಕರುಗಳನ್ನು ನಾವು ಆತ್ಮೀಯತೆಯಿಂದ ಕೇಳಿಕೊಂಡು ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು.
ಈ ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ಮತ್ತು ರಾಸುಗಳಿಗೆ ಕ್ಯಾಮೇನಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಬೀದಿ ದೀಪ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ವ್ಯವಸ್ಥೆ ಕಲ್ಪಿಸಿದ್ದಾರೆಂದು ರಾಸುಗಳ ಜಾತ್ರೆಯಲ್ಲಿ ಪಾಲ್ಗೊಂಡ ರೈತರು ಮಾಹಿತಿ ಹಂಚಿಕೊಂಡರು.
ಪೂರ್ವಿಕರ ಆಚರಣೆಯಂತೆ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲೇ ರಾಸುಗಳ ಜಾತ್ರೆ ಆರಂಭವಾಗುತ್ತದೆ. ಈ ಜಾತ್ರೆಯಲ್ಲಿ ರಾಜ್ಯ ಸೇರಿದಂತೆ ಹೊರ ರಾಜ್ಯದ ರೈತರು ಪಾಲ್ಗೊಂಡು ರಾಸುಗಳನ್ನು ಮಾರಾಟ ಮಾಡಿ ಖರೀದಿ ಮಾಡುತ್ತಿದ್ದು, ಈ ವಹಿವಾಟು ಒಂದು ವಾರದ ತನಕ ತ್ತದೆ. ರಾಸುಗಳ ಜಾತ್ರೆ ಮುಗಿದ ಬಳಿಕ ರಥಸ್ತಮಿಯಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀಆಂಜನೇಯ ಸ್ವಾಮಿಯ ರಥೋತ್ಸವ ನಡೆಯಲಿದೆ.


























