
ಬೆಂಗಳೂರು, ನ. ೧೪- ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಕಾಂಗ್ರೆಸ್‌ನ ಮಹಾಘಟ ಬಂಧನ್‌ಗೆ ಏಕೆ ಹಿನ್ನಡೆಯಾಗಿದೆ ಗೊತ್ತಿಲ್ಲ. ನಾನು ಫಲಿತಾಂಶದ ಬಗ್ಗೆ ಪೂರ್ಣ ಮಾಹಿತಿ ಪಡೆದು ಮತ್ತೆ ಮಾತನಾಡುತ್ತೇನೆ ಎಂದರು.
ಬಿಹಾರದಲ್ಲೂ ವೋಟ್ ಚೋರಿ ಆಗಿರಬಹುದು. ಏನೇ ಇರಲಿ, ನಾವು ಜನರ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.
ಬಿಹಾರದಲ್ಲಿ ಜನ ಘಟಬಂಧನ್‌ಗೆ ಏಕೆ ಮತ ಹಾಕಿಲ್ಲ, ಎನ್‌ಡಿಎಗೆ ಇಷ್ಟು ದೊಡ್ಡ ಬಹುಮತ ಹೇಗೆ ಬಂದಿದೆ ಎಂಬುದು ಗೊತ್ತಿಲ್ಲ. ಎಲ್ಲದರ ಬಗ್ಗೆಯೂ ಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.
ಬಿಹಾರದಲ್ಲಿ ಕಾಂಗ್ರೆಸ್‌ನ ಮುಖ್ಯ ಗುರಿಯಾಗಿದ್ದ ಓಬಿಸಿ ವರ್ಗದವರೇ ಕಾಂಗ್ರೆಸ್ ಪಕ್ಷದ ಕೈ ಹಿಡಿದಿಲ್ಲ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಯಾರು, ಅವರು ಓಬಿಸಿ ಅಲ್ಲವೇ ಎಂದರು.
ತನಿಖೆ: ಕ್ರಮ
ಮುಧೋಳದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಸಂದರ್ಭದಲ್ಲಿ ನಿನ್ನೆ ಯಾರು ಕಬ್ಬು, ಟ್ರ್ಯಾಕ್ಟರ್, ಟ್ರ್ಯಾಲಿಗಳನ್ನು ಸುಟ್ಟು ಹಾಕಿದ್ದಾರೆ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ರೈತರು ನಾವು ಸುಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ತನಿಖೆ ನಡೆಸುತ್ತಿದ್ದೇವೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಜ್ಯದ ಎಲ್ಲಾ ರೈತರು ಪ್ರತಿಟನ್ ಕಬ್ಬಿಗೆ ೩,೩೦೦ ರೂಪಾಯಿ ನಿಗದಿ ಮಾಡಿರುವುದನ್ನು ಒಪ್ಪಿದ್ದಾರೆ. ಮುಧೋಳದ ರೈತರು ಸಹ ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.
ರೈತರ ಹೋರಾಟದ ಹಿಂದೆ ರಾಜಕೀಯ ಪ್ರಚೋದನೆ ಇದ್ದೇ ಇರುತ್ತದೆ. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಹಾಗಾಗಿ ಪ್ರಚೋದನೆ ಮಾಡಿಸುತ್ತಾರೆ ಎಂದು ದೂರಿದರು.




























