Home ಜಿಲ್ಲೆ ಬೆಂಗಳೂರು ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳ

ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳ

ಚಿಕ್ಕಬಳ್ಳಾಪುರ : ಏ. ೧-ಸಬ್‌ಕೋ ಸನ್ಮತಿ ದೇ ಭಗವಾನ್ ಎಂಬ ಸಮಸಮಾಜದ ಆಶಯಗಳಿಗೆ ಜೀವ ತುಂಬುವ ಮೌಲ್ಯಗಳೇ ಸಾಹಿತಿ ಸರಸಮ್ಮ ಕೃತಿಗಳ ಜೀವಾಳವಾಗಿದೆ ಎಂದು ವಿಮರ್ಶಕ ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು.


ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ಸಾಹಿತಿ ಸರಸಮ್ಮ ಅವರ
ಮಾನವ ಬಂಧುತ್ವ, ಸತ್ಯ ದರ್ಶನ, ಬಾಳದೀವಿಗೆ ಎಂಬ ಮೂರು ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.


ವೃತ್ತಿಗೆ ನಿವೃತ್ತಿಯಿದೆ, ಪ್ರವೃತ್ತಿಗೆ ನಿವೃತ್ತಿಯಿಲ್ಲ. ಶಾಲಾ ಶಿಕ್ಷಕಿಯಾದರೂ ಬಿಡುವಿನ ವೇಳೆಯಲ್ಲಿ ಸಾಹಿತ್ಯದ ಪರಿಚಾರಿಕೆ ಮಾಡಿದ್ದರ ಫಲವಾಗಿ ಇವರಿಂದ ೪೫ ಕೃತಿಗಳು ರಚಿತವಾಗಿವೆ.ಇಷ್ಟು ಕೃತಿಗಳನ್ನು ಬರೆಯುವುದು ಸಾಮಾನ್ಯವಲ್ಲ. ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.


ಸಾಹಿತಿ ಸರಸಮ್ಮ ಅವರ “ಮಾನವ ಬಂಧುತ್ವ ಕಾದಂಬರಿ ಮುದ್ದಣ್ಣನ ರಾಮಾಶ್ವಮೇದ ಕೃತಿಯಲ್ಲಿರುವ ಬರುವ ಮನೋರಮೆಯರ ಸರಸ ಸಲ್ಲಾಪದ ಸಂದರ್ಭವನ್ನು ನೆನಪಿಗೆ ತರುವ ಕೃತಿಯಾಗಿದೆ.ಸಾಮಾನ್ಯದ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು ಎಸ್.ವಿ. ರಂಗಣ್ಣ ಕರೆದಂತೆ, ಕಸದ ತೊಟ್ಟಿಯಲ್ಲಿ ಸಿಕ್ಕಿಕುವ ಮಗುವನ್ನು ಯಶೋಧ ತನ್ನದೆಂಬಂತೆ ಬೆಳೆಸುತ್ತಾಳೆ.ಸುಬ್ಬಲಕ್ಷಿ?ಮ ಮತ್ತು ಮೋಹನ್ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ,ಹೀಗೆ ಇಡೀ ಕಾದಂಬರಿಯಲ್ಲಿ ಪೌರಾಣಿಕ ಇತಿಹಾಸ ವರ್ತಮಾನದ ಸಂಗತಿಗಳು ಅಡಕವಾಗಿವೆ.ಹೀಗಾಗಿ ಸಾಹಿತಿ ಸರಸಮ್ಮ ಅವರು ಬರೆದ ಮಾನವ ಬಂಧುತ್ವ ಕಾದಂಬರಿಯು ಸುವರ್ಣದ ಚೌಕಟ್ಟು ಹಾಕಿದಂತೆ ಕಂಡಿದೆ.ಅಷ್ಟು ಸೊಗಸಾಗಿ ಅವರು ಈ ಕೃತಿಯನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು.


ಕುವೆಂಪು ಕಾರಂತ, ಬೇಂದ್ರೆ, ರಾವ್‌ಬಹಾದ್ದೂರ್, ಅನಕೃ ಇಂತಹ ಮೇರು ಸಾಹಿತಿಗಳು ಬೃಹತ್ ಕಾದಂಬರಿಗಳನ್ನು ಬರೆದಿದ್ದಾರೆ. ಇವುಗಳನ್ನು ಓದಲು, ಓದಿದ್ದನ್ನು ಅರ್ಥೈಸಿಕೊಳ್ಳಲು ಅಪಾರವಾದ ಜ್ಞಾಪಕಶಕ್ತಿ ಬೇಕೇಬೇಕು.ಇಲ್ಲದಿದ್ದಲ್ಲಿ ಸಾಹಿತಿ ಸಾಹಿತ್ಯ ಮತ್ತು ಓದುಗರ ನಡುವೆ ಅನುಸಂದಾನ ಉಂಟಾಗುವುದಿಲ್ಲ. ಸರಸಮ್ಮ ಅವರ ಕೃತಿಗಳು ಸರಳವಾಗಿ ಓದಿಸಿಕೊಳ್ಳುವ ಗುಣವುಳ್ಳವು ಎಂದರು.


ಪರಿವರ್ತನೆಯ ತತ್ವಗಳನ್ನು ಒಳಗೊಂಡ ಕೃತಿಯೇ ಸತ್ಯದರ್ಶನ ಎಂಬ ಕಥಾ ಸಂಕಲನವಾಗಿದೆ. ಸಂಬಂಧ ಮತ್ತು ಬಾಂಧವ್ಯಗಳನ್ನು ಸಾರುವ ಕಥೆಗಳು ಇಲ್ಲಿ ಹೇರಳವಾಗಿವೆ.ಬದುಕಿನಲ್ಲಿ ಎದುರಾಗುವ ಆಕಸ್ಮಿಕ ಸಂಬಂಧಗಳೇ ಲೇಖಕಿಯನ್ನು ಈ ಎತ್ತರಕ್ಕೆ ರೂಪಿಸಿವೆ.ಇಂತಹ ಆಕಸ್ಮಿಕ ಸಂಬಂಧಗಳೇ ಮಾನವತೆ ಪೊರೆಯುವ ಜೀವದ್ರವ್ಯವಾಗಿವೆ ಎಂದರು


ಹನಿಗವನಗಳ ಬಗ್ಗೆ ನನಗೆ ಒಲವಿಲ್ಲ.ಬರೆದರೆ ದಿನಕರ ದೇಸಾಯಿ ಥರ ಬರೆಯಿರಿ, ಇಲ್ಲವಾದಲ್ಲಿ ಕವನವೇ ಬರೆಯಿರಿ ಎಂಬುದು ಕವಿಗಳಿಗೆ ನನ್ನ ಸಲಹೆ. ನಮ್ಮ ಬದುಕು ಪಾವನ ಆಗಬೇಕು.ಅಪಹಾಸ್ಯದ ಬದುಕಿನಲ್ಲಿ ಸತ್ಯ ದರ್ಶನ ಅಸಾಧ್ಯ.ಕನ್ನಡಕ್ಕೆ ಚಾರಣ ಯಾರೆಂದರೆ ಕವಿ ಸರ್ವಜ್ಞ. ತೆಲುಗಿನ ವೇಮನ ಹಾಗೆ ಇವರಿದ್ದರು ಎಂದರು.


ಸರಸಮ್ಮ ಅವರ ಹನಿಗವನ ಸಂಕಲ ಸರಳವಾಗಿದೆ ನೇರವಾದ ಅನುಭವ ದ್ರವ್ಯರಾಶಿಯನ್ನು ಒಳಗೊಂಡಿದೆ.ಇಂದಿನ ಮನುಷ್ಯರಿಗೆ ಸ್ವಾರ್ಥವೇ ಬುನಾದಿ.ಗಾಜಿನ ತೊಟ್ಟಿಯ ಮೀನುಗಳಾಗಿದ್ದಾರೆ.ವ್ಯಕ್ತಿ ಕೇಂದ್ರವೇ ಪ್ರಧಾನವಾದ ಸ್ವಾರ್ಥ ಕೇಂದ್ರಿತ ಬದುಕನ್ನು ಹೊದ್ದುವರ ಅಟ್ಟಹಾಸ ನಮ್ಮ ನಡುವಿದೆ. ಮನೆಯಂತೆ ಪ್ರಕೃತಿಯೂ ನಮಗೆ ಪಾಠಶಾಲೆ ಆಗಿದೆ.ಇದನ್ನು ಮಾದರಿಯಾಗಿ ತೆಗೆದು ಕೊಂಡರೆ ಸಮಾಜ ಆರೋಗ್ಯವಂತವಾಗಿರಲಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಸಿ.ಅಶ್ವತ್ಥ ನಾರಾಯಣ, ನಿವೃತ್ತ ಇಂಜನಿಯರ್ ಪುರುಷೋತ್ತಮ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ನಂಗಲಿ,ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಮುನಿರಾಜು, ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಮಕ್ಕಳ ವೈದ್ಯ ಡಾ.ಶ್ಯಾಮಸುಂದರ್, ಹಿರಿಯ ಸಾಹಿತಿ ಗೋಪಾಲ ಗೌಡ ಕಲ್ವಮಂಜಲಿ, ಕಾರ್ಯದರ್ಶಿ ರಾಮಕೃಷ್ಣ ರೆಡ್ಡಿ,ಖಜಾಂಚಿ ತಿರುಮಳಪ್ಪ, ಕಸಾಪ ಪ್ರಧಾನ ಕಾರ್ಯದರ್ಶಿ ಅಮೃತ ಕುಮಾರ್, ಲೇಖಕಿ ಸರಸಮ್ಮ ,ನಿ.ನೌ.ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣ ಇದ್ದರು.