
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೨೨: ಶರಣ ಸಾಹಿತ್ಯವು ಕನ್ನಡದ ಅಳಿಯದ ಅಮೂಲ್ಯ ಸಂಪತ್ತಾಗಿದ್ದು, ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ತಮ್ಮ ಮನೆ ಮಾರಾಟ ಮಾಡಿ ಮುದ್ರಣಾಲಯ ಸ್ಥಾಪಿಸಿ, ಊರೂರು ಹಾಗೂ ಮಠ-ಮಾನ್ಯಗಳನ್ನು ಅಲೆದು ತಾಳೆಗರಿಗಳನ್ನು ಸಂಗ್ರಹಿಸಿ ಶರಣರ ವಚನ ಸಾಹಿತ್ಯವನ್ನು ಉಳಿಸಿದ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಅವರ ಸೇವೆ ಅನನ್ಯವಾಗಿದೆ. ಅವರು ನಿತ್ಯ ಸ್ಮರಣೀಯರಾಗಿದ್ದು, ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಸಂಸ್ಕಾರಯುತ ಜೀವನ ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಬಬಲೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಮದಾಪುರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿ. ಬಾಳಾಸಾಹೇಬಗೌಡ ಪಾಟೀಲ ಅವರ ಸ್ಮರಣಾರ್ಥ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮಮದಾಪುರ ವಿರಕ್ತಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಸಮಾಜಕ್ಕೆ ಶರಣರ ಚಿಂತನೆಗಳನ್ನು ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಉಪಾಧ್ಯಕ್ಷ ಮುತ್ತೇಶ್ ಗಡ್ಡರಮಠ ವಹಿಸಿದ್ದರು. ವಿಶ್ರಾಂತ ಮುಖ್ಯೋಪಾಧ್ಯಾಯ ಬಸವರಾಜ ಗೋಟ್ಯಾಳ ಅವರು “ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಅವರ ಬದುಕು ಮತ್ತು ಸಾಹಿತ್ಯ ಸೇವೆ” ಕುರಿತು ವಿಶೇಷ ಉಪನ್ಯಾಸ ನೀಡಿ, ಅವರ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಪಿ. ಬಿರಾದಾರ, ಬಿ.ಸಿ. ಸಾರವಾಡ, ಭೀಮರಾಯ ಅಮಜಗೋಳ, ಮಲ್ಲಪ್ಪ ತೊದಲಬಾಗಿ, ಪ್ರಾಚಾರ್ಯೆ ಪಾರ್ವತಿ, ಉಪಪ್ರಾಚಾರ್ಯ ರಾಘವೇಂದ್ರ ಪುರೋಹಿತ, ಶರಣ ಕರಿಕಲ್ಲ, ರಫೀಕ್, ಮಾರುತಿ ಮಾದರ ಸೇರಿದಂತೆ ಅನೇಕ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.































