ಕೋಲ್ಹಾರ:ಜೂ.13: ಕೊಲ್ಹಾರ ಪಟ್ಟಣದಲ್ಲಿ ಬುಧವಾರ ವಿನೀತ ದೇಸಾಯಿ ಮನೆತನದ ಸಂಯುಕ್ತ ಆಶ್ರಯದಲ್ಲಿ ಕಾರಹುಣ್ಣಿಮೆ ಕರಿಹರಿಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು.
ಮುಂಗಾರಿನ ಪ್ರಥಮ ಹಬ್ಬ ಕಾರಹುಣ್ಣಿಮೆ ದಿನ ರೈತರ ಹಬ್ಬವಾದ ಕಾರಹುಣ್ಣಿಮೆ ಕರಿ ಹರಿಯುವ ಸಂಪ್ರದಾಯ ಜೂನ್ 11ರಂದು ಬುಧವಾರ ಪಟ್ಟಣದಲ್ಲಿ ಆಚರಿಸಲಾಯಿತು.
ಕಾರ ಹುಣ್ಣಿಮೆ ದಿನ ರೈತರೂ ತಮ್ಮ ಎತ್ತುಗಳನ್ನು ಶೃಂಗರಿಸಿ ಆ ಎತ್ತುಗಳನ್ನು ಗ್ರಾಮದ ದೇಸಾಯಿಯವರ ಮನೆಯಿಂದ ಐದು ಎತ್ತುಗಳನ್ನು ಓಟದ ಸ್ಪರ್ಧೆಯ ಮೂಲಕ ಕಾರಹುಣ್ಣಿಮೆ ಕರಿ ಹರಿಯುವ ಸಂಪ್ರದಾಯದ ಆಚರಣೆ ನಡೆದುಕೊಂಡು ಬಂದಿದೆ ಈ ವರ್ಷ ಬಳೂತಿಯ ಎತ್ತು ಮುಂದು ಬಂದಿದೆ ಎಂದು ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಮಲ್ಲಪ್ಪ ಗಣಿ ಹೇಳಿದರು.
ಪ್ರತಿಯೊಂದು ರೈತ ಕುಟುಂಬದಲ್ಲಿ ನೆಚ್ಚಿನ ಎತ್ತುಗಳನ್ನು ಶುಚಿಗೊಳಿಸಿ, ರೋಗ ರುಜಿನ ಬಾರದಂತೆ ಔಷಧೋಪಚಾರ ಮಾಡಿ, ರಂಗು ರಂಗಿನ ಬಣ್ಣ ಬಳಿದು, ಗೆಜ್ಜೆ ಸರ, ಗುಮರಿ ಸರ, ಮುತ್ತಿನ ಸರ, ಬಣ್ಣ ಬಣ್ಣದ ಹಗ್ಗಗಳಿಂದ ಎತ್ತುಗಳನ್ನು ಶೃಂಗರಿಸಿ ದೈವಿ ಸ್ವರೂಪಿ ಎಂದು ತಿಳಿದು ವಿಶೇಷ ಪೂಜೆ ಹಾಗೂ ನೈವೇದ್ಯ ಸಲ್ಲಿಸಿದರು.
ವಿಶೇಷತೆ: ಕಾರಹುಣ್ಣಿಮೆ ದಿನ ಐದು ಎತ್ತುಗಳನ್ನು ಕರಿಹರಿಯುವರು ಮೊದಲನೇದು ದೇಸಾರದು, ಎರಡನೇದು ಸರ್ಕಾರದು, ಮೂರನೇದು ಕೆಂಪು, ನಾಲ್ಕುನೇದು ಬಿಳಿ,ಐದನೇಯದು ಬಳೂತಿ ಹೀಗೆ ಯಾವ ಎತ್ತು ಮೊದಲು ಬರುವುದೋ ಆ ವರ್ಷ ಆ ಫಲ ಜಾಸ್ತಿ ದೊರೆಯುತ್ತದೆ ಎಂದು ರೈತರ ಭಾವನೆಯಾಗಿದೆ ಎಂದು ದೇಸಾಯಿ ಮನೆತನದ ವಿನೀತ್ ತಮ್ಮಾರಾಯ ದೇಸಾಯಿ ಹೇಳಿದರು.
ಕಾರು ಹುಣ್ಣಿಮೆ ಕರಿ ಹರಿಯುವ ಸಂಪ್ರದಾಯದಲ್ಲಿ ಕೊಲ್ಹಾರ ಪಟ್ಟಣದ ದೇಸಾಯಿ ಮನೆತನದವರು ಮತ್ತು ಸಮಸ್ತ ಗುರುಹಿರಿಯರು, ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳ ರೈತರು ಯುವಕರು ಭಾಗವಹಿಸಿದ್ದರು.