ಸಮಸಮಾಜದ ಸಿದ್ಧಾಂತ ನಮ್ಮ ಹಿರಿಮೆ-ಪ್ರೊ.ಡಾ.ಬಿ.ಕೆ.ರವಿ

ಕೋಲಾರ,ಜ,೨೭- ಸ್ವಾತಂತ್ರ್ಯ,ಸಮಾನತೆ, ಸಹೋದರತೆಯ ಜೊತೆಗೆ ಸರ್ವ ಧರ್ಮೀಯ ಸಹಿಷ್ಣುತೆಯೇ ಸಂವಿಧಾನದ ಹಿರಿಮೆಯಾಗಿದೆ ನಾವು ಸಂವಿಧಾನವನ್ನು ಗೌರವಿಸುವ ಮೂಲಕ ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ ಕರೆ ನೀಡಿದರು.


ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದ ೭೭ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ, ಬಾಪೂಜಿ, ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಸಂವಿಧಾನದ ಸಮ ಸಮಾಜದ ಸಿದ್ದಾಂತದ ಹಿರಿಮೆ ಕುರಿತು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಎಂದರು.


ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ಪ್ರಗತಿಶೀಲ ರಾಷ್ಟ್ರವಾಗಿರುವ ಹೊರಹೊಮ್ಮುತ್ತಿರುವ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಲು ಸಂವಿಧಾನ ಸಹಕಾರಿಯಾಗಿದೆ ನಮ್ಮ ಇಡೀ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮ ಸಂವಿಧಾನ ಶ್ರೇಷ್ಟವಾಗಿದೆ ಎಂದು ಹೇಳಿದರು.


ಅಂಬೇಡ್ಕರ್ ನೇತೃತ್ವದ ಸಂವಿಧಾನ ಸಮಿತಿಯು ೨ ವರ್ಷ ೧೧ ತಿಂಗಳು ೧೮ ದಿನಗಳ ಕಾಲ ಕೈಬರಹದಲ್ಲಿ ಬರೆದ ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ನವೆಂಬರ್ ೨೬, ೧೯೪೯ ರಂದು ಅಂಗೀಕರಿಸಿ, ೧೯೫೦, ಜ.೨೬ ರಂದು ಅಳವಡಿಸಿಕೊಂಡಿದ್ದರ ನೆನಪಿನಲ್ಲಿ ೭೭ ನೇ ಗಣರಾಜ್ಯೋತ್ಸವ ಆಚರಿಸುತ್ತಿರುವುದಾಗಿ ವಿವರಿಸಿದರು.


ಶ್ರೇಣಿಕೃತ ವರ್ಗ ಸಂಘರ್ಷದ ರಾಷ್ಟ್ರವಾದ ಭಾರತದಲ್ಲಿ ಇಂದು ಸಂವಿಧಾನದಿಂದಾಗಿ ಆದ ಬದಲಾವಣೆಯಿಂದ ಕೂಲಿ ಮಾಡುವ ಬಡವ ಈ ದೇಶದ ಪ್ರಧಾನಿಯಾಗಬಹುದು ಎಂದ ಅವರು, ಭಾರತವು ಅಖಂಡವಾಗಿ ಉಳಿಯಲು ಹಾಗೂ ವಿವಿಧ ಭಾಷೆ, ಜಾತಿ, ಧರ್ಮಗಳ ಜನರು ಭಾರತೀಯರಾಗಿ ಐಕ್ಯತೆಯಿಂದ ಮಿಳಿತವಾಗಲು ಸಂವಿಧಾನ ಸಹಕಾರಿಯಾಗಿದ್ದು, ಯುವ ವಿದ್ಯಾರ್ಥಿ ಪೀಳಿಗೆ ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಂಡು ಭಾರತದ ಐಕ್ಯತೆ, ಸಮಗ್ರತೆ, ಸಮಾನತೆ ಆಶಯಗಳಿಗೆ ಧಕ್ಕೆ ತಾರದಂತೆ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ದೇಶವನ್ನು ಒಗ್ಗೂಡಿಸಲು ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಿಶ್ರಮದ ಕುರಿತು ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ವಿವಿಯ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಲೋಕನಾಥ್, ವಿತ್ತಾಧಿಕಾರಿ ವಸಂತ ಕುಮಾರ್, ಸಿಂಡಿಕೇಟ್ ಸದಸ್ಯರುಗಳಾದ ಗೋಪಾಲಗೌಡ, ಅಕಾಡೆಮಿಕ್ ಕೌನ್ಸಿನಲ್‌ನ ಎಲ್ಲಾ ಸದಸ್ಯರು ಹಾಜರಿದ್ದರು.