
ಕಲಬುರಗಿ:ಫೆ.6: 12ನೇ ಶತಮಾನದಲ್ಲಿ ಕಾಯಕ ನಿಷ್ಠೆ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಶ್ರೇಷ್ಠ ಹಿರಿಯ ಶರಣ. ಸಮಾಜದ ಆಚಾರ ವಿಚಾರಗಳನ್ನು ಸುಧಾರಿಸಿ ಸೂಕ್ತ ಮಾರ್ಗ ತೋರಿಸಲು ಅವತರಿಸಿದ ಮಹಾಪುರುಷ. ಅವರ ಜೀವನ ಮೌಲ್ಯ ಮತ್ತು ಗುಣಗಳನ್ನು ಅನುಸರಿಸಿ ಬದುಕುವುದನ್ನು ಕಲಿಯಬೇಕೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ಅಭಿಪ್ರಾಯಪಟ್ಟರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವೀರ ಶರಣ ಮಡಿವಾಳ ಮಾಚಿದೇವರು ಜಯಂತ್ಯುತ್ಸವ ಸಮಾರಂಭದಲ್ಲಿ ವೀರ ಶರಣ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಶರಣರ ಕುರಿತ ಕಾರ್ಯಕ್ರಮಗಳಿಂದ ಅವರ ಜೀವನ, ಬೋಧನೆ ಮತ್ತು ವಚನಗಳಿಂದ ಸಮಾಜಕ್ಕೆ ಅಧಿಕೃತ ಮಾಹಿತಿಗಳು ಸಿಗುತ್ತಿವೆ. ಅವರ ಆದರ್ಶ ತತ್ವಗಳನ್ನು ನಿರ್ಲಕ್ಷಿಸದೆ ಗೌರವಿಸಿ ಅನುಸರಿಸಿದರೆ ಉತ್ತಮ ಜೀವನ ನಮ್ಮದಾಗಲಿದೆ. ಮಾಚಿದೇವ ಶರಣರನ್ನು ಪ್ರಕೃತಿ ಗೌರವಿಸಿದೆ. ಸಮಾಜದ ದುಖಃ ದುಮ್ಮಾನಗಳು ನಿವಾರಣೆಯಾಗಿವೆ. ದುರ್ಬಲರು ಮತ್ತು ನಿರ್ಗತಿಕರ ರಕ್ಷಣೆ ಮತ್ತು ಬದುಕಿನ ಸುಧಾರಣೆಗೆ ಮಾಚಿದೇವರ ನುಡಿಗಳು ಎಚ್ಚರಿಸಿವೆ ಎಂದರು.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಟಿ. ಡಿ. ರಾಜಣ್ಣ ಮುಖ್ಯ ಅತಿಥಿಯಾಗಿ ಮಾತನಾಡಿ ವೀರ ಶರಣ ಮಡಿವಾಳ ಮಾಚಿದೇವರು 12ನೇ ಶತಮಾನದ ಶ್ರೇಷ್ಠ ಹಾಗೂ ಹಿರಿಯ ಶರಣ. ಇವರ ಕಟ್ಟು ನಿಟ್ಟಿನ ಕಾಯಕ ನಿಷ್ಠೆ ಗುರುತಿಸಿ ಮಡಿವಾಳ ಮಾಚಿ ತಂದೆ ಎಂದು ಬಸವಣ್ಣ ಸಂಬೋದಿದ್ದಾರೆ. ಅವರ ಕಾಯಕ ನಿಷ್ಠೆಯ ಶ್ರೇಷ್ಠತೆಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು. ಶೌರ್ಯದಲ್ಲಿ ಪರಾಕ್ರಮಿ, ಕಾಯಕದಲ್ಲಿ ನಿಷ್ಠೆ, ಶ್ರದ್ಧಾ ಭಕ್ತಿ, ಪವಾಡ ಪುರುಷ, ಅತಿಮಾನುಷ ಶಕ್ತಿ ಅವರಿಗಿತ್ತು ಎಂದು ಅನೇಕ ಕಾವ್ಯ, ಪುರಾಣ, ಶಾಸನಗಳು, ಶಿಲ್ಪಗಳು ಮತ್ತು ಜನಪದರ ಹಾಡುಗಳಲ್ಲಿ ವ್ಯಕ್ತವಾಗಿವೆ. ಬಿಜ್ಜಳನ ಸೈನ್ಯವನ್ನು ಸೋಲಿಸಿದ. ಮಡಿ ಬಟ್ಟೆ ಕೆಡಿಸುವ ದುಷ್ಟರನ್ನು ಆಕ್ರಮಿಸಿದ. ಸಂಬಂಧ, ಅಧಿಕಾರ ಮತ್ತು ಅಮಿಷಗಳಿಗೆ ಒಳಗಾಗದೆ ಸಮಾಜದ ಮಲೀನ ವ್ಯವಸ್ಥೆ ಮತ್ತು ಜನರ ಮನಸ್ಸನ್ನು ಶುದ್ಧ ಮಾಡಿದ. ಸಮಾಜದ ಕೊಳಕು ತೊಳೆದು ವೇದ, ಶಾಸ್ತ್ರ, ಆಗಮ, ತರ್ಕ ಮತ್ತು ಪುರಾಣಗಳನ್ನು ತಿರಸ್ಕರಿಸಿ ಸಮಾನತೆಗೆ ಶ್ರಮಿಸಿದ ಮಾಚಿದೇವರು ಅತಿಯಾಸೆಗೆ ಒಳಗಾಗದೆ ಸ್ವ ಇಚ್ಚೆಯಿಂದ ಒಳಿತಿನ ಕಡೆಗೆ ಸಾಗಬೇಕು ಎಂಬ ಸಂದೇಶದೊಂದಿಗೆ ಮಾಚಿದೇವರ ಜೀವನ ವೃತ್ತಾಂತ, ವಚನ ಸಂದೇಶಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ ಎಂದು ವಿವರಿಸಿದರು.
ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಮುಖ್ಯ ಅತಿಥಿಯಾಗಿ ಮಾತನಾಡಿ ವೀರ ಶರಣ ಮಡಿವಾಳ ಮಾಚಿದೇವರು 1120 ರಿಂದ 1130ರ ಅವಧಿಯಲ್ಲಿ ಜನ್ಮ ತಾಳಿದರೆಂಬ ಇತಿಹಾಸವಿದೆ. ದೇವರ ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬಂದು ಸಮಾಜ ತಿದ್ದುವ ಕೈಂಕರ್ಯ ಮಾಡಿದ. ಜಗತ್ತಿನ ಅನೇಕ ಕಡೆಗಳಿಂದ ಬಂದ ಶರಣರು ಅನುಭವ ಮಂಟಪ ಸೇರಿ ಅಸ್ಪøಶ್ಯತೆ, ಜಾತೀಯತೆ, ಆಡಂಬರ, ಕಂದಾಚಾರ ನಿರ್ಮೂಲನೆ ಮಾಡಿ ಮಾನವೀಯತೆ ಮೆರೆದರು. ಶ್ರೇಣೀಕೃತ ವ್ಯವಸ್ಥೆಯನ್ನು ವಿರೋಧಿಸಿ ಸಮಾನತೆ ಬೆಳೆಸಲು ಶ್ರಮಿಸಿದರು. ಬುದ್ಧನಾದಿಯಾಗಿ 12ನೇ ಶತಮಾನದಲ್ಲಿ ಶರಣರು, 14ನೇ ಶತಮಾನದಲ್ಲಿ ದಾಸರು, 19ನೇ ಶತಮಾದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಸಮಾಜದ ಏಳಿಗೆಗೆ ಶ್ರಮಿಸಿದರು. ದಲಿತರು, ಹಿಂದುಳಿದವರು, ನಿರ್ಗತಿಕ ಸಮುದಾಯಗಳಿಗೆ ನ್ಯಾಯ, ಸಮಾನತೆ ಮತ್ತು ಸಮಾನ ಅವಕಾಶ ದೊರಕಿಸಿ ಕೊಟ್ಟರು ಎಂದರು.
ಕಾರ್ಯಕ್ರಮ ಸಂಚಾಲಕ ಡಾ. ಹನುಮಂತ ಜಂಗೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಡಾ. ಎನ್.ಜಿ. ಕಣ್ಣೂರ, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ದಶರಥ ನಾಯಕ ಉಪಸ್ಥಿತರಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಮಡಿವಾಳ ಮಾಚಿದೇವರ ಕುರಿತ ವಚನಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ನಿಕಾಯಗಳ ಡೀನರು, ಸಿಂಡಿಕೇಟ್ ಹಾಗೂ ವಿದ್ಯಾ ವಿಷಯಕ ಪರಿಷತ್ ಸದಸ್ಯರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಅತಿಥಿ ಉಪಾನ್ಯಾಸಕರು, ಜನಬಲ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಾಕ್ಸ್ : 12ನೇ ಶತಮಾನದ ಶರಣರ ಜೀವನ, ವಚನ ಚಳುವಳಿ, ಶರಣರ ಸಾಧನೆ, ವಚನ ಕೃತಿಗಳು ಮತ್ತು ವಿಚಾರಗಳ ಕುರಿತು ಕಿರು ಸಂಶೋಧನೆ ಆಗಬೇಕು. ಶರಣರ ಬಗ್ಗೆ ಮತ್ತಷ್ಟು ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶರಣರು, ದಾರ್ಶನಿಕರ ಸತ್ಯ ಸಂದೇಶಗಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗೆ ಪ್ರೋತ್ಸಾಹಿಸಬೇಕು. ಕಿರು ಸಂಶೋಧನೆಯಿಂದ ಶರಣರ ಬದುಕು ಪರಿಚಯ, ಜೀವನ ಮೌಲ್ಯ, ಮಾನವೀಯತೆ ಗುಣಗಳನ್ನು ವಿದ್ಯಾರ್ಥಿಗಳು ಅನುಸರಿಸುವಂತಾಗಲಿ.
- ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕುಲಪತಿ
ಗುಲಬರ್ಗಾ ವಿಶ್ವವಿದ್ಯಾಲಯ



























