ಕೇಂದ್ರದ ಯೋಜನೆ ರಾಜ್ಯದ ಸಿಎಂಗೆ ಅರ್ಥವಾಗುತ್ತಿಲ್ಲ: ಭಗವಂತ ಖೂಬಾ

ಬೀದರ್:ಜ.6: ಕಾಂಗ್ರೇಸ್ ಸರ್ಕಾರ ಜನರಿಗೆ ಸುಳ್ಳು ಭರವಸೆ ನೀಡಿ, ಬಡವರು ಬಡವರಿಗಾಗಿಯೇ ಉಳಿಯಬೇಕೆಂಬ ಉದ್ದೇಶ ಇಟ್ಟುಕೊಂಡಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಕಾಂಗ್ರೇಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರವು ಜನರನ್ನು ಕೈಹಿಡಿದು ಮೇಲೆತ್ತಬೇಕೆಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದರೆ, ರಾಜ್ಯದ ಕಾಂಗ್ರೇಸ್ ಸರ್ಕಾರ ಈ ಯೋಜನೆಗಳ ಕುರಿತು ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸುತ್ತಿದೆ ಎಂದು ತಿಳಿಸಿದರು.

ಸಿಎಂ ಸಿದ್ಧರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ವಿಬಿ ಜಿ ರಾಮ್‍ಜೀ ಕುರಿತು ತಪ್ಪು ಮಾಹಿತಿಯನ್ನು ಜನರಿಗೆ ನೀಡಿದ್ದಾರೆ ಎಂದರಲ್ಲದೆ ಈ ಯೋಜನೆಬಗ್ಗೆ ಸಿಎಂ ಅವರಿಗೆ ಹಾಗೂ ಸಚಿವ ಪ್ರಿಯಾಂಕ್ ಅವರಿಗೆ ಅರ್ಥವೇ ಆಗಿಲ್ಲ ಎಂದು ಹೇಳಿದ್ರು. ಮಹಾತ್ಮ ಗಾಂಧಿ ಹೆಸರು ನರೇಗಾದಿಂದ ಕೈಬಿಡಲಾಗಿದೆ ಎಂದು ಹೇಳುವ ಕಾಂಗ್ರೇಸ್ಸಿಗರು ಮೊದಲು ಜವಾಹರ್ ಇದ್ದ ಹೆಸರು ಕೈಬಿಟ್ಟು ಗಾಂಧಿ ಹೆಸರು ಸೇರಿಸಿದ್ದು ಕಾಂಗ್ರೇಸ್. ಈ ನರೇಗಾ ಹೆಸರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ರು.

ನರೇಗಾ ಯೋಜನೆಯಿಂದ ಹಳ್ಳಿಗಳಲ್ಲಿ ಯಾವುದೇ ಶಾಶ್ವತ ಆಸ್ತಿ ನಿರ್ಮಾಣವಾಗಿಲ್ಲ. ಬದಲಾಗಿ ನಕಲಿ ಜಾಬ್ ಕಾರ್ಡ್ ಸೃಷ್ಟಿಸಿ, ನಕಲಿ ಅಕೌಂಟ್ ಸೃಷ್ಟಿಸಿ ಕೋಟಿ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಖೂಬಾ ಆರೋಪ ಮಾಡಿದ್ರು. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗಾಗಿ, ದೀನ ದಲಿತರಿಗಾಗಿ ಹಾಗೂ ಹಿಂದುಳಿದವರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ದೇಶದ ಸುಮಾರು 80 ಕೋಟಿ ಬಡವರಿಗೆ ಅಕ್ಕಿ ನೀಡುತ್ತಿದ್ದಾರೆ. ಬಡ ಹೆಣ್ಣುಮಕ್ಕಳಿಗೆ 11 ಕೋಟಿ ಗ್ಯಾಸ್ ಸಿಲಿಂಡರ್ ನೀಡಿದ್ದಾರೆ. 11 ಕೋಟಿ ಶೌಚಾಲಯ ನಿರ್ಮಾಣ, ಮುದ್ರಾ ಯೋಜನೆಯಲ್ಲಿ 46 ಕೋಟಿ ಯುವಕರು ಲಾಭ ಪಡೆದುಕೊಂಡಿದ್ದಾರೆ. ಲಕ್‍ಪತಿ ದಿದಿ ಯೋಜನೆ ಜಾರಿಗೆ ತಂದು 2 ಕೋಟಿ ಗ್ರಾಮೀಣ ಮಹಿಳೆಯರಿಗೆ ಲಕ್‍ಪತಿ ಮಾಡುವ ಉದ್ದೇಶ ಹೊಂದಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಅಭಿವೃದ್ಧಿ ಮಾಡಬೇಕೆಂಬ ಉದ್ದೇಶದಿಂದ 360 ಡಿಗ್ರಿ ಅಖಂಡತೆಯ ದೃಷ್ಟಿಯಿಂದ ಯೋಜನೆ ಮೋದಿಜಿ ರೂಪಿಸಿದ್ದಾರೆ. ಹೀಗಾಗಿ ಸಿಎಂ ಸಿದ್ಧರಾಮಯ್ಯನವರು ತಮ್ಮ ಮಾತು ಹಿಂಪಡೆಯಬೇಕು. ದೇಶದ ಜನರ ಕ್ಷಮೆ ಯಾಚಿಸಬೇಕೆಂದು ಖೂಬಾ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ ಕರ್ನಾಟಕವನ್ನು ಕಾಂಗ್ರೇಸ್ ಸರ್ಕಾರ ಜಂಗಲ್‍ರಾಜ್ ಮಾಡಲು ಹೊರಟಿದೆ. ಇಡೀ ದೇಶ ಗೂಂಡಾರಾಜ್‍ನಿಂದ ಮುಕ್ತಿ ಹೊಂದುತ್ತಿದ್ದರೆ. ಇತ್ತ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಗೂಂಡಾರಾಜ್ ಮಾಡುತ್ತಿದೆ. ಇದಕ್ಕೆ ಮೊನ್ನೆ ಬಳ್ಳಾರಿಯಲ್ಲಿ ನಡೆದ ಘಟನೆ ಕಾರಣವಾಗಿದೆ ಎಂದು ಹೇಳಿದರು.

ಶಾಸಕ ಡಾ. ಶೈಲೇಂದ್ರ ಕೆ ಬೆಲ್ದಾಳೆ ಮಾತನಾಡಿ ಕಾಂಗ್ರೇಸ್ ಸರ್ಕಾರ ಹಲವು ವಿಷಯಗಳಲ್ಲಿ ಫೇಲ್ ಆಗಿದೆ. ವೋಟ್ ಚೊರಿ ವಿಷಯದಲ್ಲಿ, ವಿಬಿ ಜಿ ರಾಮ್‍ಜೀ ವಿಷಯದಲ್ಲಿ ಅಡ್ವಾನ್ಸ್ ಫೇಲ್ ಆಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿಯೂ ಆಡಳಿತ ಯಂತ್ರ ಕುಸಿದಿದೆ. ಉಸ್ತುವಾರಿ ಸಚಿವರು ಮನ್ನಳ್ಳಿಯಲ್ಲಿ ಸಿಎಸ್‍ಸಿ ಉದ್ಘಾಟನೆ ಮಾಡಿದರೂ ಇಂದಿಗೂ ಒಂದೇ ಒಂದು ಸಿಬ್ಬಂದಿ ನೇಮಕವಾಗಿಲ್ಲ. ಆಸ್ಪತ್ರೆಯಲ್ಲಿ ಪೆÇೀಸ್ಟ್ ಮಾರ್ಟಮ್ ಮಾಡಲು ಒಬ್ಬ ಸಿಬ್ಬಂದಿ ಕೂಡ ಇಲ್ಲ ಎಂದು ಆರೋಪಿಸಿದರು.

ಹುಮನಾಬಾದ ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಮರಳು ಲಾರಿಗಳಿಂದ ಹಳ್ಳಿಗಳಲ್ಲಿರುವ ರಸ್ತೆಗಳು ಹಾಳಾಗುತ್ತಿವೆ. ಅಧಿಕಾರಿಗಳು ಯಾಕೆ ಸುಮ್ಮನೆ ಕುಳಿತುಕೊಳ್ಳುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಪಾಟೀಲ ಅಸಮಾಧಾನ ಹೊರಹಾಕಿದರು.

ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಎಂಎಲ್‍ಸಿ ಮಾರುತಿರಾವ ಮುಳೆ, ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್, ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ, ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ, ಬಸವರಾಜ ಪವಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.