ಜಗತ್ತಿನ ತಲ್ಲಣಗಳಿಗೆ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳಲ್ಲಿ ಪರಿಹಾರ: ವಡ್ಡಗೆರೆ ನಾಗರಾಜಯ್ಯ

ಕಲಬುರಗಿ,ನ.23-ನಗರದ ಮಹೇಂದ್ರ ಫೌಂಡೇಷನ್ ವತಿಯಿಂದ ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರ 47ನೇ ಜನ್ಮ ದಿನಾಚರಣೆ ಪ್ರಯುಕ್ತ “ಜಾಗತಿಕ ತಲ್ಲಣಗಳು ಮತ್ತು ಬುದ್ಧ” ವಿಚಾರ ಸಂಕಿರಣವನ್ನು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸಮಾರಂಭ ಉದ್ಘಾಟಿಸಿ, ಕಲಬುರಗಿ ನಗರದಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿರುವುದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆಯವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅದರಲ್ಲೂ ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿ ಕೈಗೊಂಡಿರುವ ಮತ್ತು ಪ್ರಸ್ತುತ ಐಟಿ-ಬಿಟಿ ಸಚಿವರಾಗಿ ಕೈಗೊಳ್ಳುತ್ತಿರುವ ಕಾರ್ಯಗಳ ಇಡೀ ದೇಶದ ಗಮನ ಸೆಳೆದಿವೆ. ಐಟಿ ಕ್ಷೇತ್ರದಲ್ಲಿ ರಾಜ್ಯದ ಸಾಧನೆಗಾಗಿ ಸ್ವತಃ ಕೇಂದ್ರ ಸರ್ಕಾರವೇ ಬಹುಮಾನ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಕಲಬುರಗಿ ಮಹಾನಗರ ಪಾಲಿಕೆಯ 1000 ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದ ಶ್ರೇಯಸ್ಸು ಸಹ ಪ್ರಿಯಾಂಕ್ ಖರ್ಗೆಯವರಿಗೆ ಸಲ್ಲುತ್ತದೆ ಎಂದ ಅವರು, ಸಚಿವ ಪ್ರಿಯಾಂಕ್ ಅವರೊಂದಿಗೆ ಸಂವಾದ ನಡೆಸಲು ಪ್ರತಿಪಕ್ಷಗಳು ನಡಗುತ್ತವೆ ಎಂದು ಪ್ರಿಯಾಂಕ್ ಗುಣಗಾನ ಮಾಡಿದರು.
ಚಿಂತಕ ಹಾಗೂ ಕವಿ ವಡ್ಡಗೆರೆ ನಾಗರಾಜಯ್ಯ ಅವರು “ಜಾಗತಿಕ ತಲ್ಲಣಗಳು ಹಾಗೂ ಬುದ್ಧ” ವಿಷಯದ ಕುರಿತು ಮಾತನಾಡುತ್ತಾ, ಇಡೀ ಜಗತ್ತು ಮಲಗಿದ್ದಾಗ ಬುದ್ಧ ಎದ್ದಿದ್ದ ಎಂಬುದರ ಹಿಂದೆ ವಿಶಾಲವಾದ ಅರ್ಥವಿದೆ. ಇಂಥದ್ದೇ ಜಾಗೃತ ಸ್ಥಿತಿಯಲ್ಲಿದ್ದ ಬಸವಣ್ಣ ಮತ್ತು ಅಂಬೇಡ್ಕರ್ ಶೋಷಿತ ಜನರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ಈಗ ಅದೇ ಕೆಲಸವನ್ನು ಸಚಿವ ಪ್ರಿಯಾಂಕ್ ಖರ್ಗೆಯವರು ಮಾಡುತ್ತಿದ್ದಾರೆ ಎಂದು ನುಡಿದರು.
ಬುದ್ಧ ನಿರ್ವಾಣಗೊಂಡಿದ್ದರೂ ಆತ ಸಮಾಧಿಗೆ ಸೇರಿಲ್ಲ. ಬದಲಿಗೆ ಮಾನವ ಹೃದಯವಾಗಿ ರೂಪುಗೊಂಡಿದ್ದಾನೆ ಎಂದು ವ್ಯಾಖ್ಯಾನಿಸಿದ ಅವರು, ಹೃದಯಕ್ಕೆ ಸಾವಿರುವುದಿಲ್ಲ. ಅದೇನಿದ್ದರೂ ಸಂವೇದನೆಗಳಿಗೆ ಸ್ಪಂದಿಸುವ ಮೂಲಕ ಜಗತ್ತಿನ ತಲ್ಲಣಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿರುತ್ತದೆ. ಅಂತಹ ಕೆಲಸವನ್ನು ಇಂದಿಗೂ ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ಮಾಡುತ್ತಿವೆ ಎಂದು ಹೇಳಿದರು.
ಜಾಗೃತ ಹೃದಯಗಳು ಯಾವತ್ತೂ ತಮ್ಮ ಸುತ್ತಲಿನ ಹೃದಯಗಳನ್ನು ಸಹ ಜಾಗೃತಗೊಳಿಸುವ ಕೆಲಸ ಮಾಡುತ್ತವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಲ್ಲಿಯೂ ಬುದ್ಧನಂತಹ ಸಂವೇದನಾಶೀಲ ಹೃದಯವಿತ್ತು ಎಂಬ ಕಾರಣಕ್ಕಾಗಿಯೇ ಯಾವ ಧರ್ಮವನ್ನೂ ಅಪೇಕ್ಷಿಸದ ನಿರಪೇಕ್ಷ ಸಂವಿಧಾನವನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬುದ್ಧ ನೀಡಿದ ವಿಶ್ವ ಕುಟುಂಬದ ಚಿಂತನೆಯನ್ನೇ ಆಧಾರವಾಗಿಟ್ಟುಕೊಂಡು ‘ಭಾರತದ ಪ್ರಜೆಗಳಾದ ನಾವು’ ಎಂಬ ಒಕ್ಕಣೆಯೊಂದಿಗೆ ಬಾಬಾ ಸಾಹೇಬರು ಭಾರತದ ಸಂವಿಧಾನಕ್ಕೆ ಪೀಠಿಕೆ ನೀಡಿದ್ದಾರೆ ಎಂದರು.
ಬುದ್ಧ ಮತ್ತು ಅಂಬೇಡ್ಕರ್ ಮಾದರಿಯಲ್ಲೇ ಜನರು ಯಾವತ್ತೂ ಎಚ್ಚರಿಕೆ ಕಳೆದುಕೊಳ್ಳದಂತೆ ಜಾಗ್ರತೆಯಿಂದಿರುವಂತೆ ಪ್ರೇರಣೆ ನೀಡಿದವರು ಬಸವಣ್ಣನವರು ಎಂದು ವಡ್ಡಗೆರೆ ಸ್ಮರಿಸಿದರು.
ಬುದ್ಧ-ಬಸವ-ಅಂಬೇಡ್ಕರ್ ಚಿಂತನೆಗೆ ವಿರುದ್ಧವಾಗಿ ಇಂದು ಕೆಲವರು ರಾಜ್ಯಾಂಗದ ಬದಲು ಪಂಚಾಂಗ ಬೇಕೆಂದು ಹೊರಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂದ ಬಸವಣ್ಣ ಹಾಗೂ ಭಾರತಕ್ಕೆ ಸಂವಿಧಾನ ನೀಡಿದ ಬಾಬಾಸಾಹೇಬರ ಬೆಳಕಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರು ಹೊರಟಿದ್ದಾರೆ. ಇದನ್ನು ಸಹಿಸದ ಕೆಲವರು ಅವರ ವಿರುದ್ಧ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ಜಗ್ಗದ ಪ್ರಿಯಾಂಕ್ ಖರ್ಗೆ ಇಂದು ಪ್ರತಿಪಕ್ಷಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದು ವ್ಯಾಖ್ಯಾನಿಸಿದರು.
ಶಾಲಾ ಶಿಕ್ಷಣ ಇಲಾಖೆಯ (ಪ.ಪೂ) ಉಪನಿರ್ದೇಶಕ ಸುರೇಶ ಅಕ್ಕಣ್ಣ ಮಾತನಾಡಿದರು. ಪ್ರಾಚಾರ್ಯ ಅಶೋಕ ತಳಕೇರಿ ಸ್ವಾಗತಿಸಿದರು. ಫೌಂಡೇಷನ್ ಕಾರ್ಯದರ್ಶಿ ಶರಣಬಸವ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಮನಾಬಾದ್ ಉಪವಿಭಾಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ಲಕ್ಷ್ಮಣ ಎಂ.ಕನಕಟಕರ್, ಕೆಕೆಆರ್‍ಟಿಸಿ ವಿಭಾಗೀಯ ಸಂಚಾರಿ ಅಧಿಕಾರಿ ಈಶ್ವರ ಹೊಸಮನಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೇವನಗೌಡ ಪಾಟೀಲ್, ಆರ್.ಜೆ.ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ಬುರ್ಲಿ ಪ್ರಹ್ಲಾದ, ಎಂ.ಕೆ. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಸ್.ಮಾಲಿಪಾಟೀಲ, ಕೆನರಾ ಬ್ಯಾಂಕ್ ಎಂ.ಆರ್.ಎಂ.ಸಿ ಶಾಖೆಯ ಹಿರಿಯ ವ್ಯವಸ್ಥಾಪಕ ಅಜಯ ಮಡಪೆ, ಹೋಮಿಯೋಪಥಿ ವೈದ್ಯ ಡಾ.ಕೃಷ್ಣಮೂರ್ತಿ, ಪತ್ರಕರ್ತ ಮಹೇಶ್ ಕುಲಕರ್ಣಿ, ಫೌಂಡೇಷನ್ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ ದೊಡ್ಡಮನಿ ವೇದಿಕೆಯಲ್ಲಿದ್ದರು. ಎನ್.ಎಸ್‍ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಮತ್ತು ಶಬ್ದಕೋಶ ವಿತರಿಸಲಾಯಿತು.
ಅನಿಲ್ ಕುಮಾರ ಸುಗಂಧಿ, ಸತೀಶ ಸಜ್ಜನ್, ಎ.ಬಿ.ಹೊಸಮನಿ, ಯಶವಂತ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.