ಬಬಲಾದ ಶ್ರೀಗಳು ಸಮಾಜದ ದೊಡ್ಡ ಆಸ್ತಿ : ಹಾರಕೂಡ ಶ್ರೀ

ಸಂಜೆವಾಣಿ ವಾರ್ತೆ
ಬೀದರ್: ಜ.೧೩:ಮೌನ ತಪಸ್ವಿ ಕೃಷಿಋಷಿ ಪೂಜ್ಯ ಡಾ. ಗುರುಪಾದಲಿಂಗ ಮಹಾಸ್ವಾಮಿಗಳು ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಆಯೋಜಿಸಿದ ಧರ್ಮಸಭೆಯ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಿಕೃತಿ ಅಳಿಯಲಿ, ಪ್ರಕೃತಿ ಉಳಿಯಲಿ, ಸಂಸ್ಕೃತಿ ಬೆಳೆಯಲಿ ಎಂಬ ಭಾವದಲ್ಲಿ ಸಮಾಜಮುಖಿಯಾಗಿ ಧರ್ಮ ಮುಖಿಯಾಗಿ ಉತ್ತಮ ಕಾರ್ಯ ಮಾಡುತ್ತಿರುವ ಬಬಲಾದ ಶ್ರೀಗಳಿಗೆ ಕಲಬುರ್ಗಿಯ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಿದ್ದು ನಮಗೆ ಖುಷಿ ನೀಡಿದೆ.
ಡಾ. ಗುರುಪಾದಲಿಂಗ ಮಹಾಸ್ವಾಮಿಗಳು ಮೌನವಾಗಿದ್ದು, ಅವರ ಕೆಲಸ ಕಾರ್ಯಗಳೇ ಸಮಾಜದಲ್ಲಿ ಧರ್ಮ ದೀಪಗಳಾಗಿ ಬೆಳಗುತ್ತಿರುವುದು ಅವರ ತಪೋಸಾಧನೆಯ ಪ್ರತೀಕವಾಗಿದೆ.
ಹಾರಕೂಡ ಹಾಗೂ ಬಬಲಾದ ಮಠಗಳ ಆಧ್ಯಾತ್ಮ ನಂಟು ಬಹಳ ಗಟ್ಟಿಯಾಗಿದ್ದು ಪೂಜ್ಯರಿಗೆ ಹಾರಕೂಡಧೀಶ ಇನ್ನೂ ಹೆಚ್ಚಿನ ಶಕ್ತಿ ಕರುಣಿಸಲಿ ಮತ್ತು ಸರ್ವರಿಗೂ ಶುಭವಾಗಲಿ ಎಂದು ಹಾರೈಸಿದರು.
ಮೇಘರಾಜ ನಾಗರಾಳೆ, ರಾಜಕುಮಾರ ಬಿರಾದಾರ, ಹಾವಗೆಪ್ಪ ಪಾಟೀಲ, ದಗಡು ಬಿರಾದಾರ, ನಂದಕುಮಾರ ಭುಜರಕೆ, ನೀಲಕಂಠ ಪಾಟೀಲ, ಧರ್ಮರಾಯ ಅಟ್ಟೂರೆ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಬಬಲಾದಿನ ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳಿಗೆ ಹಾರಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಸಿದ್ರಾಮ ಪಾಟೀಲ ವಚನ ಗಾಯನ ನಡೆಸಿಕೊಟ್ಟರು.
ನವಲಿಂಗ ಪಾಟೀಲ ನಿರೂಪಿಸಿದರು.