ಆಡಳಿತದಲ್ಲಿರುವ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ; ನಿತಿನ್ ಗುತ್ತೇದಾರ್

ಅಫಜಲಪುರ:ಸೆ.25: ಅತಿವೃಷ್ಟಿಯಿಂದ ತೊಗರಿ ,ಹತ್ತಿ, ಕಬ್ಬು ಹೀಗೆ ಅನೇಕ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿ ಹೋಗಿವೆ.ಆದರೆ ರಾಜ್ಯ ಸರ್ಕಾರ ರೈತರಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದು,ಹೀಗಾಗಿ ರೈತರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ ಬೆಳೆ ಹಾಳಾಗಿದ್ದರೂ ಸಹ ಇಲ್ಲಿವರೆಗೂ ರೈತರಿಗೆ ಬೆಳೆವಿಮೆ ವಿತರಣೆ ಆಗಿಲ್ಲ,ಅಲ್ಲದೇ ನಿರಂತರ ಮಳೆಯಿಂದಾಗಿ ಅನೇಕ ರಸ್ತೆಗಳು ಹಾಳಾಗಿ ಹೋಗಿವೆ. ಈ ಬಗ್ಗೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದಾಗ ನಮ್ಮ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಕಳೆದ ವರ್ಷ ಗುಂಡಿ ಮುಚ್ಚಲು 2 ಕೋಟಿ ರೂ.ಬಂದಿರುವ ಅನುದಾನದಲ್ಲಿ ಯಾವುದೇ ಗುಂಡಿಗಳನ್ನು ಮುಚ್ಚದೇ ಬಂದಿರುವ ಅನುದಾನ ನೇರವಾಗಿ ಶಾಸಕರ ಮನೆಗೆ ಸೇರಿದೆ. ಪೆÇಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಸಂಬಳ ತೆಗೆದುಕೊಂಡು ಶಾಸಕರ ಸುಪುತ್ರರ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ಸರಿಯಲ್ಲ, ಒಂದು ವೇಳೆ ಇದು ನಿಲ್ಲದಿದ್ದರೆ ನಿಮ್ಮ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆ ತರುವೆ ಎಂದು ಎಚ್ಚರಿಕೆ ನೀಡಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ,ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಬೆಂಗಳೂರಿನಲ್ಲಿ ಕುಳಿತುಕೊಂಡು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಟಾಚಾರಕ್ಕೆ ಸಭೆ ನಡೆಸಿ ಪೆÇೀಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಪ್ರಚಾರ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಾರೆ ಅಷ್ಟೇ,ಅವರಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇಲ್ಲ,ಇದರಿಂದಾಗಿ ರೈತರು ದಿನನಿತ್ಯ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಪರಿಹಾರದ ಜತೆಗೆ ಬೆಳೆ ಸಾಲ ಮನ್ನಾ ಮಾಡಬೇಕು,ಒಂದು ವೇಳೆ ಮಾಡದಿದ್ದರೆ ಬಿಜೆಪಿ ರಾಜ್ಯ ನಾಯಕರನ್ನು ಕರೆಸಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ವಿದ್ಯಾಧರ ಮಂಗಳೂರೆ,ಬೀರಣ್ಣ ಕಲ್ಲೂರ,ಮಳೇಂದ್ರ ಡಾಂಗೆ, ಮಲ್ಲಿಕಾರ್ಜುನ ನಿಂಗದಳ್ಳಿ, ಶಂಕರ ಮ್ಯಾಕೇರಿ, ಬಸವರಾಜ ಸಪ್ಪನಗೋಳ,ರಮೇಶ ಬಾಕೆ, ಜ್ಯೋತಿ ಪ್ರಕಾಶ್ ಪಾಟೀಲ್,ಶ್ರೀಮಂತ ಅಂಜುಟಗಿ,ಗುರು ಸಾಲಿಮಠ,ರಾಘವೇಂದ್ರ ಮಠಪತಿ,ಬಿ.ರಾಜು ಬೇನಕನಹಳ್ಳಿ, ವಿಶ್ವನಾಥ ರೇವೂರ, ಸುನೀಲ್ ಶೆಟ್ಟಿ,ನೂರ ಅಹ್ಮದ್ ಬಾಗವಾನ, ಸಿದ್ದು ವಾಳಿ,ಕನಕ ಟೇಲರ್,ರಾಜು ಜಿಡ್ಡಗಿ,ಶರಣು ಪದಕಿ, ಧಾನು ಪತಾಟೆ, ನಾಗೇಶ್ ಕೊಳ್ಳಿ, ಬಸವರಾಜ ಚಾಂದಕವಟೆ, ರಮೇಶ ನೀಲಗಾರ,ಚೀದಾನಂದ ಮಠ, ಮಹಾಂತೇಶ ಬಡದಾಳ, ಸುಭಾಷ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.