Home ಜಿಲ್ಲೆ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತಪ್ರಮುಖ : ಡಾ.ಎಸ್.ವಿ.ಪಾಟೀಲ್

ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತಪ್ರಮುಖ : ಡಾ.ಎಸ್.ವಿ.ಪಾಟೀಲ್

ಬೀದರ, ಮಾ.11: ಮಹಿಳೆಯರು ಸಮಾಜದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದಾರೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ತಿಳಿಸಿದರು.
ಅವರು ಸೋಮವಾರ ತೋಟಗಾರಿಕೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬದ ಬೆಳವಣಿಗೆಗೆ ಮಾತ್ರವಲ್ಲದೆ ಸಾಮಾಹಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರವಾದುದು. ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಬೀದರ ಅಕ್ಕಾಪಡೆ ರಾಜ್ಯ ಸಂಯೋಜಕರಾದ ಶೈನಿ ಪ್ರದೀಪ ಗುಂಟಿ ಅವರು ಮಾತನಾಡಿ, ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣ, ರಾಜಕೀಯ, ವಿಜ್ಞಾನ ಮತ್ತು ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ಸಮಗ್ರ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಹಿಳೆಯರಿಗೆ ಸಮಾನ ಅವಕಾಶಗಳು ಮತ್ತು ಸುರಕ್ಷತೆ ದೊರಕಿದಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ ಮಾಹಾಂತೇಶ ಮಾತನಾಡಿ, ವಿದ್ಯಾರ್ಥಿಗಳಿಗಿಂತಲೂ ವಿದ್ಯಾರ್ಥಿನಿಯರಲ್ಲಿ ಧೈರ್ಯವಿದೆ ಮತ್ತು ಒಳ್ಳೆಯ ಸಾಧನೆ ಮಾಡಬೇಕೆಂಬ ಛಲವಿರುವುದರಿಂದ ವಿದ್ಯಾಭ್ಯಾಸದ ಜೊತೆಗೆ ಪಠೇತರ ಚಟುವಟಿಕೆಗಳಲ್ಲಿಯೂ ಸಹ ಅತ್ಯುತ್ತಮ ಮೈಲುಗಲ್ಲು ಸಾಧಿಸುತ್ತಿದ್ದಾರೆಂದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ ಎನ್., ಡಾ. ಅಂಬ್ರೇಶ, ಡಾ. ಕಡ್ಲಿ ವೀರೇಶ ರಾಜಕುಮಾರ ಐ., ಕಾವೇರಿ ಅವಸಂಗರದ, ಕಿರಣ ರಾಠೋಡ, ಸುನಿತಾ ಎಮ್. ಕೆ., ವಿಶಾಲ ಎನ್. ಮತ್ತು ಶಾರದಾ ಮುಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸ್ವಾಗತ ಡಾ. ಕವಿತಾ ರಾಠೋಡ, ಅತಿಥಿಗಳ ಪರಿಚಯ ಅನುರಾಧಾ ವಡಗಾವೆ, ನಿರೂಪಣೆ, ಮಹೇಶ್ವರಿ ದ್ವಿತೀಯ ವರ್ಷದ ವಿದ್ಯಾರ್ಥಿನಿ, ವಂದನಾರ್ಪಣೆ ಜಾನವಿ ಡಿ.ಆರ್. ಸಹಾಯಕ ಪ್ರಾಧ್ಯಾಪಕರು ಸುವ್ಯವಸ್ಥಿತವಾಗಿ ನಡೆಸಿಕೊಟ್ಟರು.