ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು

ಬೀದರ್:ಸೆ.19:ಪ್ರತಾಪನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದಿಂದ ಶಿಕ್ಷಕರ ದಿನಾಚರಣೆ ವೈಭವಯುತವಾಗಿ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ, ಜೆಡಿಎಸ್ ನಾಯಕ ಸೂರ್ಯಕಾಂತ ನಾಗಮಾರಪಳ್ಳಿ, ಶಿಕ್ಷಕರ ಸೇವೆಯನ್ನು ಕೊಂಡಾಡಿದರು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ, ಪರಿಹರಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಅನುದಾನದ ಸಮಸ್ಯೆ ಎದುರಾದಾಗ ಸ್ವತ: ಒಂದು ತಿಂಗಳು ಓಡಾಡಿ, ಶಿಕ್ಷಕರೊಂದಿಗೆ ಚಳುವಳಿ ನಡೆಸಿ, ಅನುದಾನ ಕೊಡಿಸಿದ್ದನ್ನು ಸೂರ್ಯಕಾಂತ ನಾಗಮಾರಪಳ್ಳಿ ಸ್ಮರಿಸಿದರು. ಹಿಂದಿನ ಸರಕಾರದ ಅವಧಿಯಲ್ಲಿ ಅನುದಾನರಹಿತ ಶಿಕ್ಷಕರು ತೀವ್ರ ಸಮಸ್ಯೆಯಲ್ಲಿ ಸಿಲುಕಿದ್ದರು. ಅನುದಾನಕ್ಕಾಗಿ ಸರಕಾರದ ಮುಂದೆ ಬೇಡಿಕೆ ಮಂಡಿಸಿದ್ದರು. ನಾನು ಶಿಕ್ಷಕರ ಪರವಾಗಿ ಆಗಿನ ಸರಕಾರದ ಮೇಲೆ ಒತ್ತಡ ಹೇರಿದ್ದೆ. ಸರಕಾರದ ಮನವೊಲಿಸಿ, ಅನುದಾನ ಸಮಸ್ಯೆ ನಿವಾರಣೆಗೆ 140 ಕೋಟಿ ರೂ. ಬಿಡುಗಡೆ ಮಾಡಿಸಿದ್ದೆ. ಅನುದಾನರಹಿತ ಶಿಕ್ಷಕರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಿದ್ದೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ಅಧಿಕಾರ ಮುಖ್ಯವಲ್ಲ, ಸೇವೆ ಮುಖ್ಯ. ಸೇವೆ ಮಾಡುವ ಮನಸ್ಸು ಇರಬೇಕು ಎಂದು ಸೂರ್ಯಕಾಂತ್ ಹೇಳಿದರು.
ಸಮಾರಂಭದಲ್ಲಿ ಮಹಾಲಿಂಗ ಸ್ವಾಮೀಜಿ, ಸೋಮಶೇಖರ ಬಿರಾದಾರ್, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಉದ್ಯಮಿ ಜೈರಾಜ ಖಂಡ್ರೆ, ಪ್ರಮುಖರಾದ ಸಂಗಶೆಟ್ಟಿ, ಸಂತೋಷ ಪಾಟೀಲ್, ರಮೇಶ ಬಿರಾದಾರ್, ಡಾ.ಸಚಿನ್ ಪಾಟೀಲ್, ಚಂದ್ರಕಾಂತ ಹೆಬ್ಬಾಳೆ, ವಿಜಯಕುಮಾರ ಪಾಟೀಲ್, ಶಿವಯೋಗಿ, ಸುಧೀರ ರಾಗಾ, ಧನರಾಜ ಕೋಡಗೆ ಮತ್ತಿತರ ಗಣ್ಯರು, ಶಿಕ್ಷಕರು, ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.