ಕಲಬುರಗಿ:ಅ.20: ರಾಷ್ಟ್ರದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಗೆ ನಿಖರವಾದ ಮಾಹಿತಿಯನ್ನು ನೀಡುವ ಮೂಲಕ ಅವುಗಳಿಗೆ ಪರಿಹಾರವನ್ನು ದೊರಕಿಸಿಕೊಡುವಲ್ಲಿ ಅಂಕಿ-ಅಂಶಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಸಂಖ್ಯಾಶಾಸ್ತ್ರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಖ್ಯಾಶಾಸ್ತ್ರವು ರಾಷ್ಟ್ರದ ಸಂಪನ್ಮೂಲಗಳ ಸದ್ಬಳಕೆಯ ಬಗ್ಗೆ ವಿವರಣೆ ನೀಡುತ್ತದೆ. ಯುವಕರು ಸಂಖ್ಯಾಶಾಸ್ತ್ರದ ಬಗ್ಗೆ ಕುತೂಹಲದಿಂದ ಹೆಚ್ಚಿನ ಅಧ್ಯಯನ ಮಾಡಿದರೆ, ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದಾಗಿದೆ.
ನಮ್ಮ ದೇಶದ ಪ್ರಸಿದ್ದ ಸಂಖ್ಯಾಶಾಸ್ತ್ರಜ್ಞ ಪ್ರೊ.ಪಿ.ಸಿ.ಮಹಲ್‍ನೊಬಿಸ್ ಅವರು ಸಂಖ್ಯಾಶಾಸ್ತ್ರ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆಯನ್ನು ನೀಡಿದ್ದಾರೆ. ದ್ವಿತೀಯ ಪಂಚವಾರ್ಷಿಕ ಯೋಜನೆಗೆ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಗೊಳಿಸಿದ್ದಾರೆ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಸೇವಾ ಕ್ಷೇತ್ರ ಸಂಬಂಧಿಸಿದಂತೆ ಅನೇಕ ಅಂಕಿ-ಅಂಶಗಳನ್ನು ಸಂಗ್ರಹಿಸಿ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ಸೂಚಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಪ್ರಮುಖರಾದ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಓಂಕಾರ ವಠಾರ, ರಾಜು ಕೊರಳ್ಳಿ ಸೇರಿದಂತೆ ಇನ್ನಿತರರಿದ್ದರು.
























