ತುಮಕೂರು, ಆ. ೨೯- ಕರ್ನಾಟಕದ ರಾಮಕೃಷ್ಣ?ವಿವೇಕಾನಂದ ಭಾವ ಪ್ರಚಾರ ಯುವ ಪರಿಷತ್ ವತಿಯಿಂದ ಆಯೋಜಿಸಿದ್ದ “ಚೇಸ್ ಯುವರ್ ಡ್ರೀಮ್’ ಕಾರ್ಯಾಗಾರ ರಾಮಕೃಷ್ಣ-ವಿವೇಕಾನಂದಾಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಹತ್ತನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ವಿಶೇಷವಾಗಿ ರೂಪುಗೊಂಡಿದ್ದ ಈ ಕಾರ್ಯಾಗಾರದಲ್ಲಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿ ಗಳಿಗೆ, ಭವಿಷ್ಯದ ವೃತ್ತಿ ಆಯ್ಕೆ ಹಾಗೂ ವೃತ್ತಿಪರ ಶಿಕ್ಷಣದ ಅರಿವು, ಅಧ್ಯಯನದಲ್ಲಿ ಏಕಾಗ್ರತೆಯ ಕೊರತೆ ನಿವಾರಣೆ,ಗುರಿ ನಿಗದಿ, ಆತ್ಮವಿಶ್ವಾಸ ವೃದ್ಧಿ, ಜೀವನ ಕೌಶಲ್ಯಗಳು, ಅಧ್ಯಯನ ಕೌಶಲ್ಯಗಳು ನಾಯಕತ್ವ ಕೌಶಲ್ಯಗಳು , ಸಂವಹನ ಕೌಶಲ್ಯಗಳು, ಸಮಸ್ಯೆ ಪರಿಹಾರ ಕೌಶಲ್ಯಗಳು, ಸಮಯ ನಿರ್ವಹಣೆ, ತಂಡದಲ್ಲಿ ಕೆಲಸ ಮಾಡುವ ಕೌಶಲ್ಯಗಳು, ೨೧ ನೇ ಶತಮಾನದಲ್ಲಿ ಸಾಮರ್ಥ್ಯ ಅಭಿವೃದ್ಧಿಗೊಳಿಸಿಕೊಳ್ಳುವುದರ ಕುರಿತಾಗಿ ಧ್ವನಿ-ದೃಶ್ಯ ಪ್ರದರ್ಶನದ ಮೂಲಕ ಅವರಿಗಿರುವ ಆಯ್ಕೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ಮತ್ತು ಜೀವನ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು’ ಎಂದು ಆಶ್ರಮದ ಕಾರ್ಯದರ್ಶಿ ಪರಮ ಪೂಜ್ಯ ಸ್ವಾಮಿ ಪರಮಾನಂದಜೀ ಮಹಾರಾಜ್ ಕಾರ್ಯಾಗಾರ ಉದ್ಘಾಟಿಸಿ ತಮ್ಮ ಆಶೀರ್ವಚನದಲ್ಲಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಮನೋತಜ್ಞ ಕುಮಾರಸ್ವಾಮಿ ಎಂ. ಎಸ್. ಮಾತನಾಡಿ, ‘ಯುವಕರಲ್ಲಿನ ಅನಂತ ಶಕ್ತಿ ಸಾಮರ್ಥ್ಯವನ್ನು ಗುರುತಿಸಿ ಅವರು ಜೀವನದಲ್ಲಿ ಕೈಗೊಳ್ಳಬಹುದಾದ ವೃತ್ತಿಪರ ಆಯ್ಕೆಗಳ ಕುರಿತು ಪೋಷಕರು ಬೆಂಬಲವಾಗಿ ನಿಲ್ಲುವುದರ ಮೂಲಕ ಅವರನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಬಹುದಾಗಿದೆ ಎಂದು ಹೇಳಿದರು.
ಅನೇಕ ಚಟುವಟಿಕೆ ಆಧಾರಿತ ತರಬೇತಿಯಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಪ್ರತ್ಯೇಕವಾಗಿ ಕಾರ್ಯಾಗಾರ ನಡೆಸಿಕೊಟ್ಟರು. ಡಾ. ಅನಸೂಯಾ ಕೆ ವಿ, ಡಾ. ಸುಧೀರ್ ರಂಗನಾಥ್, ಪ್ರಾಣೇಶ್‌ಕುಮಾರ್ ರವರು ತಮ್ಮ ಪ್ರೇರಣಾದಾಯಕ ಉಪನ್ಯಾಸಗಳ ಮೂಲಕ ಇಲ್ಲಿ ಭಾಗವಹಿಸಿದ ಪೋಷಕರು ಮತ್ತು ಶಿಕ್ಷಕರಿಗೆ ಮಕ್ಕಳ ಬೆಳವಣಿಗೆಗೆ ಪೂರಕವಾದ ಹಾಗೂ ಅವರ ಭವಿಷ್ಯದ ಶಿಕ್ಷಣ ಮತ್ತು ವೃತ್ತಿಪರ ಕೋರ್ಸುಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಹಲವಾರು ಮಾರ್ಗಗಳನ್ನು ತಿಳಿಸಿದರು.
ಹಾಗೆಯೇ ವಿದ್ಯಾರ್ಥಿಗಳು ಮತ್ತು ಪೋಷಕರ ಹಲವಾರು ಸವಾಲುಗಳಿಗೆ ಪ್ರಶ್ನೋತ್ತರ ಸಂವಾದದ ಮೂಲಕ ಸಮರ್ಪಕವಾದ ಸಲಹೆಗಳನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿದ್ಯಾಶಂಕರ್ ಮಾತನಾಡಿ, ವಿದ್ಯಾರ್ಥಿ ಗಳು ಹಾಗೂ ಪೋಷಕರಿಗೆ ಮನೋಬಲ ತುಂಬುವ ಸಂದೇಶ ನೀಡಿದರು.
ತಮ್ಮದೇ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗಳಿಸಿ ಸಾಧನೆಗೈದ ಯುವ ಸಾಧಕರಾದ ಸ್ಫೂರ್ತಿ ಮುರಳಿಧರ್, ಸುಬ್ರಹ್ಮಣ್ಯ ನಾವಡ, ವಿವೇಕ್ ಜ್ಯೋಶಿ, ಆಕಾಶ್ ಪ್ರಕಾಶ್, ಸಿರಿ ಮುರಳಿಧರ್, ಮಂಜುನಾಥ್ ಕೆ.ಎಸ್, ಸಿರಿ ಚಂದನಾ ಹಾಗೂ ಶಶಾಂಕ್ ಕೆ ಶಾಸ್ತ್ರೀ ತಮ್ಮ ಸಾಧನೆಯ ಪಯಣದಲ್ಲಿ ಪೋಷಕರ ಮತ್ತು ರಾಮಕೃಷ್ಣ ಆಶ್ರಮದಿಂದ ಪಡೆದುಕೊಂಡ ಮಾರ್ಗದರ್ಶನದ ಕುರಿತು ಹಂಚಿಕೊಂಡದ್ದು ಗಮನೀಯ ಎಂದರು. ಇದೇ ಸಂದರ್ಭದಲ್ಲಿ ಎಲ್ಲಾ ಯುವ ಸಾಧಕರಿಗೂ ರಾಮಕೃಷ್ಣ-ವಿಬೇಕಾನಂದ ಆಶ್ರಮದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಸಕ್ರಿಯವಾಗಿ ಭಾಗವಹಿಸಿ ಇಂತಹ ಕಾರ್ಯಾಗಾರಗಳ ಅವಶ್ಯಕತೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ನಗರದ ಹಲವಾರು ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವೇದಘೋಷ, ಉಪನ್ಯಾಸ, ಪ್ರಶ್ನೋತ್ತರ, ಸಂವಾದ ಹಾಗೂ ಚಟುವಟಿಕೆ ಅಧರಿತ ತರಬೇತಿ ಈ ಕಾರ್ಯಾಗಾರದ ಮುಖ್ಯ ಅಂಶಗಳಾಗಿದ್ದವು.
ಸ್ವಾಮಿ ಧೀರನಂದಜೀ ಮಹಾರಾಜ್ ರವರು ದಿವ್ಯ ಸಾನಿಧ್ಯ ವಹಿಸಿದ್ದರು.


























