Home ಜಿಲ್ಲೆ ಕಲಬುರಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ ಅಪಾರ: ಅಪ್ಪಾರಾವ್ ಅಕೋಣಿ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ ಅಪಾರ: ಅಪ್ಪಾರಾವ್ ಅಕೋಣಿ

ಕಲಬುರಗಿ, ಆ.23: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಪತ್ರಿಕೆಗಳು ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ, ಸ್ವಾತಂತ್ರ್ಯದ ಹಂಬಲ ಹಾಗೂ ಬ್ರಿಟಿಷರ ವಿರುದ್ಧ ಹೋರಾಟದ ಮನೋಭಾವ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ನಿವೃತ್ತ ಜಂಟಿ ನಿರ್ದೇಶಕರಾದ ಅಪ್ಪಾರಾವ್ ಅಕೋಣಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘ(ರಿ)À ಕಲಬುರಗಿ ಘಟಕದ ವತಿಯಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳ ಪಾತ್ರ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಪತ್ರಿಕೆಗಳು ಕೇವಲ ಸುದ್ದಿಯನ್ನು ಪ್ರಕಟಿಸುವ ಮಾಧ್ಯಮಗಳಾಗಿರಲಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವುದು, ಬ್ರಿಟಿಷರ ದಬ್ಬಾಳಿಕೆಯನ್ನು ಪ್ರಶ್ನಿಸುವುದು ಹಾಗೂ ರಾಷ್ಟ್ರೀಯ ಚಳವಳಿಗೆ ಜನಬೆಂಬಲ ಒಗ್ಗೂಡಿಸುವ ಪ್ರಬಲ ಸಾಧನಗಳಾಗಿದ್ದವು ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವೆಂಕಟರಾವ್ ಕಾಗಲ್ಕರ್ ಅವರ ಪತ್ರಿಕಾ ಧರ್ಮದ ಬದ್ಧತೆ ಹಾಗೂ ಪತ್ರಿಕೋದ್ಯಮಕ್ಕೆ ಅವರು ನೀಡಿದ ಕೊಡುಗೆಯನ್ನು ಅಕೋಣಿಯವರು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಕಲಬುರಗಿ ಕೂಡಾ ಮಾಜಿ ಅಧ್ಯಕ್ಷ ಡಾ. ಮಹ್ಮದ್ ಅಸಗರ್ ಚುಲ್ಬುಲ್ ಉದ್ಘಾಟಿಸಿ ಮಾತನಾಡಿ, ಸಂಘದ ಬೆಳವಣಿಗೆಗೆ ತನು, ಮನದಿಂದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ವತಿಯಿಂದ ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದನ್ನು ಶ್ಲಾಘಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಆನಂದ ಪಿ. ಮಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸಂಘಕ್ಕೆ ಮಾನ್ಯತೆ ದೊರೆತಿರುವುದಾಗಿ ತಿಳಿಸಿದರು. ಯುವ ಪತ್ರಕರ್ತರು ಹಾಗೂ ಯುವ ಸಂಪಾದಕರಿಗೆ ಪೆÇ್ರೀತ್ಸಾಹ ನೀಡುವ ಜತೆಗೆ ಸಂಪಾದಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಸಂಘ ಸದಾ ಮುಂದಿರಲಿದೆ ಎಂದರು.

ಉರ್ದು ಪತ್ರಿಕೆಯ ಸಂಪಾದಕ ಹಾಗೂ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಜೀಜುಲ್ಲಾ ಸರ್ ಮಸ್ತ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉರ್ದು ಸೇರಿದಂತೆ ವಿವಿಧ ಭಾಷೆಗಳ ಪತ್ರಿಕೆಗಳು ವಹಿಸಿದ ಮಹತ್ವದ ಪಾತ್ರವನ್ನು ವಿವರಿಸಿದರು.

“ಪತ್ರಿಕೆಯನ್ನು ಕನ್ನಡ, ಹಿಂದಿ ಅಥವಾ ಉರ್ದು ಎಂದು ವಿಂಗಡಿಸುವುದಕ್ಕಿಂತ ಅದು ಪತ್ರಿಕೋದ್ಯಮದ ಧ್ವನಿ ಎಂಬುದನ್ನು ಅರಿಯಬೇಕು. ಪತ್ರಿಕೆ ಎಂದರೆ ಸತ್ಯದ ಧ್ವನಿ. ಈ ಧ್ವನಿಯೇ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರಲ್ಲಿ ಹೋರಾಟದ ಕಿಚ್ಚು ಮೂಡಿಸಿತು,” ಎಂದು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪತ್ರಿಕೆಗಳು ಮುಂಚೂಣಿಯಲ್ಲಿದ್ದವು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರಲ್ಲಿ ಪತ್ರಕರ್ತರೂ ಇದ್ದರು. ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿದವು ಎಂದು ಅವರು ಹೇಳಿದರು.

ಕನ್ನಡ ಪತ್ರಿಕೆಗಳ ಪಾತ್ರ ಕುರಿತು ಮಾತನಾಡಿದ ಸಂಪಾದಕ ಚಂದ್ರಕಾಂತ ಬಿರಾದಾರ್, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಪತ್ರಿಕೆಗಳ ಮೂಲಕ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಜಾಗೃತಿ ಹಾಗೂ ಸ್ವಾತಂತ್ರ್ಯದ ಆಶಯಗಳನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸಲಾಯಿತು ಎಂದು ವಿವರಿಸಿದರು.

ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಶಂಕರ ಕೊಡ್ಲಾ ಮಾತನಾಡಿ, ಸಂಘ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಶುಭ ಹಾರೈಸಿದರು.

ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸಂಘದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಾಬುರಾವ್ ಕೋಬಾಳ ಸ್ವಾಗತ ಗೀತೆ ಹಾಡಿದರು. ಸಿದ್ದಣ್ಣ ಯಡಳ್ಳಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಾವನೂರ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಪಾದಕರು, ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.