
ಬಸವಕಲ್ಯಾಣ: ಜ.30: ಪರಂಪರೆಯ ಅರಿವನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ಪ್ರಕಾಶಕರ ಮೇಲಿದೆ ಎಂದು ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯದರ್ಶಿ ಅಭಿನವ ರವಿಕುಮಾರ್ ಹೇಳಿದರು.
ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಪುಸ್ತಕೋದ್ಯಮ ನೆಲೆ-ಬೆಲೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಾಹಿತಿಯನ್ನೇ ಜ್ಞಾನ ಎಂದು ಭಾವಿಸುವ ಹೊಸತಲೆಮಾರು ರೂಪುಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು .
ಸ್ಪರ್ಧಾತ್ಮಕ ಪಠ್ಯಗಳ ನೆಪದಲ್ಲಿ ಮೂಲ ಪಠ್ಯಗಳನ್ನು ಕಲಿಸದೆ ಗೈಡ್ ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮೂಲ ಪಠ್ಯಗಳ ಓದು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಾಸಕ್ಕೆ ಮತ್ತು ಸೃಜನಶೀಲತೆಗೆ ಸಾಮಥ್ರ್ಯ ಸಹಕಾರಿಯಾಗಿದೆ
ಎಂದರು.
ಹೊಸ ಹೊಸ ಆಲೋಚನೆಗಳು ಮೊಳೆಯಲು, ವಿಶ್ಲೇಷಣಾ ಮನೋಧರ್ಮ ಹೆಚ್ಚಾಗುಲು ಕಲಿಕೆಯ ಗುಣಮಟ್ಟ ಸುಧಾರಿಸಲು ಮೂಲ ಪಠ್ಯಗಳ ಅನುಸಂಧಾನ ಅಗತ್ಯ ಎಂದರು.
ಸೃಷ್ಟಿ ಪಬ್ಲಿಕೇಷನ್ಸ್ ಸೃಷ್ಟಿ ನಾಗೇಶ್ ಮಾತನಾಡಿ , ಶರಣರ ನಾಡು ಬಸವಕಲ್ಯಾಣ ಮತ್ತು ವಚನಸಾಹಿತ್ಯದ ಗರಿಮೆಯನ್ನು ನೋಡಿ ಒಮ್ಮೆ ಮನಸ್ಸಿನೊಳಗೆ ತೆಗೆದುಕೊಳ್ಳಬೇಕು. ಚಾಲುಕ್ಯರ ಆಡಳಿತದ ಚಿತ್ರಣವನ್ನು, ಬಸವಣ್ಣನವರ ಆದರ್ಶವನ್ನು ಹೊಸ ನೆಲೆಗಳಲ್ಲಿ ಅಧ್ಯಯನ ಮಾಡಿ ಕೃತಿ ರೂಪ ನೀಡಬೇಕು. ವಚನ ಸಾಹಿತ್ಯ ಮತ್ತು ಶರಣ ಸಂಸ್ಕøತಿಯ ಅರಿವಿನ ವಿಸ್ತಾರವನ್ನು ಓದುಗ ವಲಯಕ್ಕೆ ತಿಳಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ಅದು ಇನ್ನಷ್ಟು ಸಾಧ್ಯವಾಗಬೇಕು ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರ ಸಾಹಿತ್ಯ ಆಕಾಡೆಮಿ ಮುಂತಾದ ಸಾಹಿತ್ಯ ಸಂಸ್ಥೆಗಳು ಇಂಥ ಪ್ರದೇಶಗಳಲ್ಲಿ ಕಮ್ಮಟಗಳನ್ನು ನಡೆಸಿ ಯುವ ಬರಹಗಾರರ ಮತ್ತು ಓದುಗರ ಸಮುದಾಯವನ್ನು ಬೆಳೆಸಬೇಕು ಎಂದರು.
ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಮಾತನಾಡಿ, ಪುಸ್ತಕಗಳು ಗಂಭೀರ ಓದುಗರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ. ಪ್ರಕಾಶನ ಸಂಸ್ಥೆ ಬೆಳವಣಿಗೆ ಓದುಗ ವರ್ಗವನ್ನು ಅವಲಂಬಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಲೋಕವನ್ನು ಅರಿಯಲು ಅಕ್ಷರ ಮತ್ತು ಪುಸ್ತಕ ಸಂಸ್ಕೃತಿಯಿಂದ ಸಾಧ್ಯ. ಸಂಶೋಧನೆ, ವಿಮರ್ಶೆ, ಸಾಹಿತ್ಯದ ತಾತ್ವಿಕತೆಗಳ ಗಂಭೀರ ಅನುಸಂಧಾನಕ್ಕಾಗಿ ಮೂಲಪಠ್ಯ ಓದು ಬೇಕು.
ಸಮಾಜ, ರಾಜಕಾರಣ ಸೇರಿ ಎಲ್ಲವುಗಳನ್ನು ಸಾಂಸ್ಕೃತಿಕ ಪಠ್ಯವಾಗಿ ಅಧ್ಯಯನ ಮಾಡಬೇಕಾದರೂ ಪುಸ್ತಕಗಳು ಪ್ರತಿಕಾರಗಳಾಗಿ ಪರಿಗಣಿಸಬೇಕಾಗಿದೆ ಎಂದರು.
ಬೆಂಗಳೂರಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳಾದ ಭೂಮಿ ಬುಕ್ಸ್ ನ ವಿಶಾಲಕ್ಷಿ ಶರ್ಮ , ಕದಂಬ ಪ್ರಕಾಶನದ ನಾಗೇಶ್, ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್, ಕನ್ ಕ್ಲೇವ್ ಇಂಡಿಯಾ ಪ್ರಕಾಶನದ ನಂದೀಶ್ ಸಂವಾದದಲ್ಲಿ ಮಾತನಾಡಿದರು. ಉಪನ್ಯಾಸಕರಾದ ಅಶೋಕ ರೆಡ್ಡಿ ಗದಲೇಗಾಂವ, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂದೆ, ರೋಶನ್ ಬಿ, ಎಂಡಿ ಜಬಿ, ಜಗದೇವಿ ಜಾವಳಗೆ, ಶೀತಲ್ ರೆಡ್ಡಿ, ಸನತ್ ರೆಡ್ಡಿ, ಪ್ರಿಯಾ ಚೌಹಾಣ್ ಮೊದಲಾದವರು.
ಚೆನ್ನಬಸಪ್ಪ ಗೌರ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿದರು. ಸಂಗೀತಾ ಮಹಾಗಾಂವೆ ವಂದಿಸಿದರು.

























