ಸಂವಿಧಾನದ ಹಕ್ಕು ಮತ್ತು ಆಶಯ ಈಡೇರಿಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ:ಬಾಬುರಾವ ಯಡ್ರಾಮಿ

ಕಲಬುರಗಿ:ನ.27: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಲೇಖನಿಯಿಂದ ಮೂಡಿಬಂದ ಹಾಗೂ ಇಡೀ ವಿಶ್ವದಲ್ಲಿ ಸರ್ವಶ್ರೇಷ್ಠವಾದ ಪುಸ್ತಕ ಭಾರತದ ಸಂವಿಧಾನ. ಇದರ ಹಕ್ಕು ಮತ್ತು ಆಶಯ ಈಡೇರಿಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಘಟಕದ ಅಧ್ಯಕ್ಷರಾದ ಶ್ರೀ ಬಾಬುರಾವ ಯಡ್ರಾಮಿ ಹೇಳಿದರು.
ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನ ವಿಭಾಗ, ಆಂಗ್ಲ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಹಾಗೂ ಕನ್ನಡ ಅಧ್ಯಯನ ಹಾಗೂ ಸಂಶೋಧನ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಆಯೋಜಿಸಿದ್ದ “ಸಂವಿಧಾನ ದಿನಾಚರಣೆ” ಕುರಿತು ಅವರು ಮಾತನಾಡಿದರು.
ಇಂದು ನಾವೆಲ್ಲರೂ ನಮ್ಮ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. 1949 ನವೆಂಬರ್ 26ರಂದು ಅಂಗೀಕಾರವಾದ ಹಾಗೂ 1950 ಜನೆವರಿ 26ರಂದು ಅನುಷ್ಠಾನಗೊಂಡ ಸಂವಿಧಾನದ ಆಶಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಂವಿಧಾನದಲ್ಲಿ ತಿಳಿಸಿದಂತೆ ಯಾರೂ ಮೇಲು ಕೀಳೆನ್ನದೇ ಎಲ್ಲರೂ ಸಮಾನರು ಎಂಬ ವಾಕ್ಯವನ್ನು ಉಳಿಸಿ ಬೆಳೆಸಿ ಬಲಿಷ್ಠ ಭಾರತ ನಿರ್ಮಾಣವಾದಾಗಲೇ ಸಂವಿಧಾನಕ್ಕೊಂದು ಅರ್ಥ ಬರುವುದು. ಇದನ್ನೇ ಬಸವಾದಿ ಶರಣರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಸಂವಿಧಾನವು ನಮಗೆಲ್ಲರಿಗೂ ಬದುಕುವ, ಶಿಕ್ಷಣ ಪಡೆಯುವ, ಘನತೆಯಿಂದ ಜೀವಿಸುವ ಹಕ್ಕನ್ನು ಕೊಟ್ಟಿದೆ. ಇದರ ರಕ್ಷಣೆಯ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ. ತಮ್ಮ ನುಡಿಗಳಲ್ಲಿ ಹಾಗೂ ಕಾರ್ಯಗಳಲ್ಲಿ, ಮನುಷ್ಯರಿಗೆ ಮಾನವೀಯತೆ ತುಂಬಿದ ಬುದ್ಧ, ಬಸವ, ಅಂಬೇಡ್ಕರ್ ಅವರು ಈ ದೇಶದ ಶಕ್ತಿಯಾಗಿದ್ದರು ಎಂದರು.
ಸಮಾಜ ವಿಜ್ಞಾನ ನಿಕಾಯದ ಡೀನ್ ಟಿ. ವಿ. ಶಿವಾನಂದನ್ ತಮ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, 2015 ರವರೆಗೆ ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿರಲಿಲ್ಲ. ಈ ದಿನವನ್ನು ಪ್ರತಿಯೊಂದು ಸಂಸ್ಥೆಗಳಲ್ಲಿ ಹಾಗೂ ಇಡೀ ಭಾರತದಲ್ಲಿ ರಾಷ್ಟ್ರೀಯ ಹಬ್ಬವಾಗಿ ಗುರುತಿಸಿದ ಹಾಗೂ ಇದನ್ನು ಆಚರಿಸುತ್ತಿರುವ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ನಾವು ಧನ್ಯವಾದ ಹೇಳಬೇಕು ಎಂದು ಒತ್ತಿ ಹೇಳಿದರು. ಪ್ರಧಾನಿಗಳು 11ನೇ ಅಕ್ಟೋಬರ್ 2015ರಂದು ಮುಂಬೈನಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಶಿಲಾನ್ಯಾಸ ನೆರವೇರಿಸಿದ್ದು ಕೂಡ ಶ್ಲಾಘನೀಯ ಕೆಲಸವಾಗಿದೆ ಎಂದು ತಿಳಿಸಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಹಕ್ಕನ್ನು ಹೊಂದಿದ್ದಾನೆ. ವಾಕ್ ಸ್ವಾತಂತ್ರ್ಯ, ಸಮಾನತೆ, ಭದ್ರತೆ, ಪುರುಷ ಮತ್ತು ಮಹಿಳಾ ಸಮಾನತೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು.
ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ಪಾಟೀಲ, ಕಾರ್ಯಕ್ರಮದಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂವಿಧಾನವನ್ನು ಅರ್ಥಮಾಡಿಕೊಂಡರೆ ನೀವು ಜೀವನದಲ್ಲಿ ಶಕ್ತಿಶಾಲಿಯಾಗಿ, ಜ್ಞಾನದಿಂದ ಪರಿಪೂರ್ಣರಾಗಲು ಸಾಧ್ಯವಾಗುತ್ತದೆ. ಯಾವುದೇ ಧರ್ಮ, ಯಾವುದೇ ಜಾತಿಯನ್ನದೇ ಎಲ್ಲರೂ ಸಮಾನರಾಗಿರಬೇಕು ಎಂದು ಸಂವಿಧಾನದಿಂದ ತಿಳಿಯಬಹುದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆಲ್ಲರಿಗೂ ಮಾದರಿ. ಜೀವನದಲ್ಲಿ ಏನನ್ನಾದರೂ ಸಾಧಿಸಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದೇವೆ ಎಂದಾದರೇ ಅದು ಸಂವಿಧಾನದಿಂದ ಮಾತ್ರ ಸಾಧ್ಯವಾಗಿರುವಂತಹದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸುಮಂಗಲಾ ರೆಡ್ಡಿ ನೆರೆದ ಸಭಿಕರೆಲ್ಲರಿಗೂ, ಭಾರತ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ಪತ್ರಿಕೋದ್ಯಮ ವಿಭಾಗದ ವಿಧ್ಯಾರ್ಥಿನಿ ಕು. ಐಶ್ವರ್ಯ ಪ್ರಾರ್ಥನಾ ಗೀತೆ ಹಾಡಿದರು. ಕನ್ನಡ ವಿಭಾಗದ ಪ್ರೊ. ಚೆನ್ನಮ್ಮಾ ಅಲ್ಬಾ ಕಾರ್ಯಕ್ರಮ ನಿರೂಪಿಸಿದರೆ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಪಾಟೀಲ ವಂದಿಸಿದರು.