
ಭಾಲ್ಕಿ : ಮೇ.22:ಎಲ್ಲಾ ಇಲಾಖೆಗಳಲ್ಲಿಯ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುವುದೇ ಲೋಕಾಯುಕ್ತ ಕಾಯಿದೆಯ ಮೂಲ ಉದ್ದೇಶವಾಗಿದೆ ಎಂದು ಕಲಬುರಗಿ ಲೋಕಾಯುಕ್ತ ಎಸ್.ಪಿ, ಬಿ.ಕೆ.ಉಮೇಶ ಹೇಳಿದರು. ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಕಚೇರಿಯ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2018ರ ತಿದ್ದುಪಡಿ ಅನುಸಾರ ಲೋಕಾಯುಕ್ತ ಕಾಯಿದೆಯಲ್ಲಿ ಸರ್ಕಾರಿ ನೌಕರರೂ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಅವಕಾಶವಿದೆ.
ಅಧಿಕಾರಿಗು ಸಮರ್ಪಕವಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಕಾಯಿದೆ ರೂಪಿಸಲಾಗಿದೆ. ಅಧಿಕಾರಿಗಳು ಸರ್ಕಾರದ ಗೈಡ್‍ಲೈನ್ಸ್ ಪ್ರಕಾರ ನ್ಯಾಯಯುತ ಕಾರ್ಯ ನಿರ್ವಹಿಸಬೇಕು. ಹೆಚ್ಚಿನ ದೂರುಗಳು ಬುರುವುದಕ್ಕೆ ಅವಕಾಶ ಮಾಡಿಕೊಡಬಾರದರು. ದೂರುಗಳ ಅರ್ಜಿಗಳು ಆದಸ್ಟುಬೇಗ ವಿಲೆವಾರಿಯಾಗಬೇಕು. ಅಂದಾಗ ಮಾತ್ರ ಭ್ರಷ್ಟಾಚಾರ ನಿಯಮದ ಪ್ರಕಾರ ಕಾನೂನಿನ ರೀತಿಯಲ್ಲಿ ಕಾರ್ಯನಿರ್ವಸಲು ಸಾಧ್ಯವಾಗುತ್ತದೆ. ಅಧಿಕಾರಿಗಳು ತಮ್ಮ ತಮ್ಮ ಕಛೇರಿಗಳಲ್ಲಿ ಲೋಕಾಯುಕ್ತ ಫಲಕಗಳನ್ನು ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೀದರ ಲೋಕಾಯುಕ್ತ ಕಛೇರಿಯ ಡಿವಾಯ್‍ಎಸ್‍ಪಿ ಹಣಮಂಥರಾಯ, ಲೋಕಾಯುಕ್ತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಛೇರಿಗಳಿಗೆ ಭೇಟಿ ನೀಡುವುದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲು ಲೋಕಾಯುಕ್ತ ಅಧಿಕಾರಿಗಳ ಮುಖ್ಯ ಕಾರ್ಯವಾಗಿದೆ. ಅಪೂರ್ಣ ಮಾಹಿತಿ ಇದ್ದರೆ, ಅರ್ಜಿಗಳನ್ನು ಪರಿಶೀಲಿಸಿ ಅರ್ಜಿಗಳನ್ನು ತಿರಸ್ಕರಿಸುವ ಅಧಿಕಾರವೂ ಲೋಕಾಯುಕ್ತರಿಗಿದೆ. ಭ್ರಷ್ಟಾಚಾರ ನಿರ್ಮೂಲನೆಯೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು. ಇದೇವೇಳೆ ಸಾರ್ವಜನಿಕರಿಂದ 5 ದೂರುಗಳು ಬಂದಿದ್ದು, ದೂರುಗಳ ಬಗ್ಗೆ ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಕಛೇರಿ ಬೀದರಿನ ಸಂತೋಷ ರಾಠೋಡ, ಬಾಬಾ ಸಾಹೆಬ ಪಾಟೀಲ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ತಹಸೀಲದಾರ ಮಲ್ಲಿಕಾರ್ಜುನ ವಡ್ಡನಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ.ಹಳ್ಳದ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ, ಗ್ರೇಡ್2 ತಹಸಿಲ್ದಾರ ಪಲ್ಲವಿ ಬೆಳಕೇರಿ, ಗೋಪಾಲ ಹಿಪ್ಪರಗಿ, ಎಆರ್‍ಟಿಓ ಮಹಮದ್ ಜಾಫರ್ ಸಾಧಿಕ್, ತೋಟಗಾರಿಕೆ ಅಧಿಕಾರಿ ಮಾರುತಿ ಜಾಬನೂರ, ಎನ್‍ಈಕೆಆರ್‍ಟಿಸಿ ವ್ಯವಸ್ಥಾಪಕರಾದ ಶಿವಕುಮಾರ ಹೂಗಾರ, ಭದ್ರಪ್ಪಾ ಹುಡಗೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಇ.ಓ ಸೂರ್ಯಕಾಂತ ಬಿರಾದಾರ ಸ್ವಾಗತಿಸಿದರು. ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ ವಂದಿಸಿದರು.
ರೈತರಿಗೆ ಸಮರ್ಪಕವಾಗಿ ಬೀಜ ವಿತರಿಸಿ
ಕೃಷಿ ಅಧಿಕಾರಿಗಳು ರೈತರಿಗೆ ಸಮರ್ಪಕವಾಗಿ ಬೀಜ ವಿತರಿಸಬೇಕು ಎಂದು ತಿಳಿಸಿದ ಲೋಕಾಯುಕ್ತರಿಗೆ, ಕೃಷಿ ಅಧಿಕಾರಿ ಪಿ.ಎಮ್.ಮಲ್ಲಿಕಾರ್ಜುನ ಬೀಜ ವಿತರಣೆಯ ಸಂಪೂರ್ಣ ಮಾಹಿತಿ ನೀಡಿದರು. ಪ್ರಸ್ತುತ ಸಾಲಿನಲ್ಲಿ ಒಂದು ವಾರ ಮುಂಚಿತವಾಗಿ ಮುಂಗಾರು ಪ್ರಾರಂಭವಾಗಿದೆ. ಹೀಗಾಗಿ ಪ್ರತಿವರ್ಷ ಜೂನ್ ನಲ್ಲಿ ವಿತರಿಸುತ್ತಿದ್ದ ಬೀಜಗಳನ್ನು ಈ ವರ್ಷ ಮೇ 26 ರಿಂದಲೇ ವಿತರಿಸಲಾಗುತ್ತಿದೆ. ಸೋಯಾ, ತೊಗರಿ, ಹೆಸರು ಮತ್ತು ಉದ್ದು ಈ ಭಾಗದ ಪ್ರಮುಖ ಬೆಳಗಳಾಗಿವೆ. ಕಳೆದ ಸಾಲಿನಲ್ಲಿ ಸೋಯಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ಈ ವರ್ಷ ಸೋಯಾ ಬೀಜಕ್ಕೆ ಹೆಚ್ಚಿಗೆ ಬೇಡಿಕೆ ಸಲ್ಲಿಸಲಾಗಿದೆ. ನಮ್ಮ ತಾಲೂಕಿನಲ್ಲಿ ಬೀಜದ ಕೊರತೆ ಇಲ್ಲ. ಕಳೆದ ಸಾಲಿನಲ್ಲಿ 28 ಸಾವಿರ ಕ್ವಿಂಟಾಲ್ ಸೋಯಾ ಬೀಜ ಮಾರಾಟ ಮಾಡಲಾಗಿದೆ. 6 ಹೊಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿವೆ. ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಆರೊಗ್ಯ ಇಲಾಖೆಯ ಡಾ| ರವಿ ಕಲಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಸತೀಶ ಸಂಗಣ್ಣನವರು ತಮ್ಮ ಇಲಾಖೆಯ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಲ್ಲಿಸಿದರು.