
ಬೀದರ:ಮಾ.25:ಭಾವೈಕ್ಯತೆ ಸೀಮಿತವಾದ ಅವಧಿ ಆದರೆ ಮನುಷ್ಯತ್ವದಿಂದ ಬದುಕಿದರೆ ಇಡೀ ಜೀವನ ಸಮೃದ್ಧಿ. ಲಿಂಗಾಯತರು ತಮ್ಮ ಹೊಲದಲ್ಲಿ ಬಿತ್ತಿ ಬೆಳೆದ ರಾಶಿ ಮೊದಲು ಎಲ್ಲ ಕಾಯಕ ಜೀವಿಗಳಿಗೆ ಕೊಟ್ಟು ಉಳಿದದ್ದನ್ನು ತಾನು ಬಳಸಿ ಸಂತಸ ಪಡುವುದೇ ಸಮಾಜದ ಅಭಿವೃದ್ಧಿ ಎಂದು ಪೂಜ್ಯ ಶ್ರೀ ನಿಜಗುಣಾನಂದ ಪ್ರಭು ಸ್ವಾಮಿಗಳು ಮನ್ನಳ್ಳಿ ಬಸವ ಸಂದೇಶ ಯಾತ್ರೆಯ ಸಮಾರಂಭದಲ್ಲಿ ನುಡಿದರು. ಬಸವ ಸಂದೇಶ ಪಾದ ಯಾತ್ರೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡುತ್ತ.. ಬಸವಣ್ಣನವರಲ್ಲಿ ಜಾತಿ ರಹಿತ, ಧರ್ಮ ಸಹಿತ ರಕ್ತಗತವಾಗಿತ್ತು. ತಾನೂ ಬದುಕಿ ಇತರರನ್ನು ಪ್ರೇರಣೆ ನೀಡುವುದೇ ಬಸವ ಧರ್ಮದ ಮುಖ್ಯ ಉದ್ದೇಶ.
ಮನ್ನಳ್ಳಿಯಲ್ಲಿ ಒಂದೂ ಮೂರ್ತಿಯಿಲ್ಲ, ಇದೊಂದು ಒಳ್ಳೆಯ ಇತಿಹಾಸ. ಮೂರ್ತಿಯಿಂದ ಅನೇಕ ಕಡೆ ಜಗಳ, ವೈಷಮ್ಯಗಳಾಗಿ ಇಡೀ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಯಾರಿಗೂ ನೆಮ್ಮದಿಯಿರಲ್ಲ. ಇಲ್ಲಿ ಎಲ್ಲರು ಸಹೋದರ ಭಾವನೆಯಿಂದ ಬಾಳುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ. ಇಲ್ಲಿ ದ್ವೇಷ, ಅಸೂಯೆ, ಭಯದ ವಾತಾವರಣ ಇಲ್ಲ, ಪೆÇಲೀಸ್ ಕಟ್ಟೆ ಹತ್ತುವುದು ಬಲು ವಿರಳ ಎಂಬುದು ಆಲಿಸಿ ಸಂತಸಗೊಂಡಿರುವೆನು.ಇಂಥ ಒಳ್ಳೆಯ ವಾತಾವರಣ ಕಲ್ಪಿಸಿ ಕೊಡಲು ಬಸವ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಇಂದು ಎಲ್ಲೆಡೆ ಜಾತಿ ವಿಷ ಬೀಜದಿಂದ ಸಮಾಜ ನಲುಗುತ್ತಿದೆ.ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ ನವರಲ್ಲಿ ಅದೇ ಜ್ಞಾನ ಉಳಿದವರಲ್ಲಿ ಅದೇ ಜ್ಞಾನ. ಸೂರ್ಯನ ಬೆಳಕು ಎಲ್ಲರಿಗೂ ಬೇಕು ಇಲ್ಲಿ ತಾರತಮ್ಯವಿಲ್ಲ. ಬಸವಣ್ಣ ಸಮ ಸಮಾಜವನ್ನು ಕಟ್ಟಿ ಸದೃಡರಾಗಿ ಬಾಳು ಬೆಳಗಿಸಲು ವಚನಗಳ ಮೂಲಕ ಸಂದೇಶ ನೀಡಿದ್ದಾರೆ. ಇಂದು ಮಕ್ಕಳು ಮೊಬೈಲ್ ಬಳಸಿ ತಮ್ಮ ಸಂಸ್ಕಾರ, ಸಂಸ್ಕøತಿ ಹಾಳು ಮಾಡಿ ಕೊಳ್ಳುತ್ತಿದ್ದಾರೆ. ಅದರಿಂದ ಹೊರಬರಬೇಕಾದರೆ ಪಾಲಕರು ಎಚ್ಚರರಾಗಬೇಕು. ಹೆಣ್ಣುಮಕ್ಕಳು ಸಂಸ್ಕೃತಿ ಕಾಪಾಡಬೇಕು. ಹೆಣ್ಣು ಮಕ್ಕಳು ಹಾಳಾದರೆ ಇಡೀ ಕುಟುಂಬದ ವ್ಯವಸ್ಥೆ ಹಾಳಾಗುತ್ತದೆ, ಹೆಣ್ಣು ಮಕ್ಕಳು ಎದ್ದತಕ್ಷಣ ವಿಭೂತಿ ಧರಿಸಿ ಮುಂದಿನ ಕೆಲಸ ಕಾರ್ಯಗಳು ಪ್ರಾರಂಭಿಸಲು ಪೂಜ್ಯರು ತಿಳಿಸಿದರು.
ಜಿಲ್ಲಾ ಯುವ ಬಸವಕೇಂದ್ರ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಬಸವಣ್ಣನವರ ತತ್ತ್ವ ಸಿದ್ಧಾಂತ ನಮಗೆಲ್ಲರಿಗೂ ಬೇಕು. ಅಲ್ಲಿ ಸಾಮಾಜಿಕ ಕಳಕಳಿ, ಶಿಕ್ಷಣ, ಆರ್ಥಿಕ ಕ್ರಾಂತಿ ಜೊತೆಗೆ ಸಮಾನತೆಗಾಗಿ ಶರಣರು ಕ್ರಾಂತಿ ಮಾಡಿದ್ದಾರೆ. ಹೆಣ್ಣು, ಮಣ್ಣು, ಹೊನ್ನಿಗಾಗಿ ಕ್ರಾಂತಿ ನಡೆಯದೆ ಮಾನವೀಯ ಮೌಲ್ಯಗಳಿಗಾಗಿಯೇ ನಡೆದದ್ದು ಒಂದು ದಾಖಲೆ ಎಂದರು.
ಮನ್ನಳ್ಳಿ ಲಿಂಗಾಯತ ಸಮಾಜದ ಅಧ್ಯಕ್ಷರಾದ ಅನೀಲಕುಮಾರ ಪನ್ನಾಳೆ ಪ್ರಾಸ್ತಾವಿಕ ಮಾತನಾಡಿ ಇಂದು ನಮ್ಮೂರಿಗೆ ಗುರು ಬಂದು ದರುಶನ ಕೊಟ್ಟಿರುವುದು ಸಂತಸ ತಂದಿದೆ. ನಮ್ಮೂರಲ್ಲಿಯೂ ಒಂದು ತಿಂಗಳ ಪ್ರವಚನ ಮಾಡಲು ಸಮಯ ಕೊಡಲು ಮನವಿ ಸಲ್ಲಿಸಿದರು. ನಮ್ಮಲ್ಲಿ 1945 ರಿಂದ ಗ್ರಾಮದಲ್ಲಿ ಬಸವಣ್ಣ ನವರ ಪ್ರಾರ್ಥನೆ, ಪೂಜೆ, ಬಸವಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡು ಬಸವ ಸಮಾಜ ಕಟ್ಟಿ ಬೆಳೆಸಿದ್ದೇವೆ ಎಂದರು. ವೇದಿಕೆ ಮೇಲೆ ಬಾಬು ದಾನಿ, ಶಿವಶಂಕರ ಟೋಕರೆ, ಹಮೀದಮಿಯ್ಯ ನಿರ್ಣಾ ಮುಸ್ಲಿಂ ಮುಖಂಡರು, ಶಂಕರ ಬಾಬು ದಲಿತ ಮುಖಂಡರು, ಯೇಸು ಕ್ರೈಸ್ತ ಮುಖಂಡರು, ಹಣಮಂತ ಪಂಚಬಾಯಿ ಗೊಂಡ ಸಮುದಾಯ ಮುಖಂಡರು, ಗೋಪಾಳರಾವ ಭೂಮಿ ಸಮಾಜ ಮುಖಂಡರು, ಸುನೀಲಕುಮಾರ ಕೋಳಿ ಸಮಾಜ ಮುಖಂಡರು ಜೊತೆಗೆ ಜಹೀರಾಬಾದಿನ ಡಾ ಮಠಪತಿ, ರಾಜಶೇಖರ ಶೆಟಕಾರ ಹಾಜರಿದ್ದರು.
ಮೊದಲಿಗೆ ಬಾಪುರಾವ ಮಡಕಿ ಸ್ವಾಗತಿಸಿದರೆ, ಶ್ರೀಕಾಂತ ತುಗಾ ನಿರೂಪಣೆ ಮಾಡಿದರೆ, ಮಲ್ಲಿಕಾರ್ಜುನ ಕಾಮಾ ವಂದಿಸಿದರು. ಮೊದಲು ಹಳ್ಳಿಯ ಮುಖ್ಯ ಬೀದಿಗಳಿಂದ ಬಸವ ಮಂತ್ರ ಘೋಷಗಳೊಂದಿಗೆ, ವಿವಿಧ ಶಾಲೆಯ ಮಕ್ಕಳ ಲೆಜಿಮ, ಡಂಬಲ್ಸ್ ಗಳಿಂದ ಭವ್ಯ ಮೆರವಣಿಗೆ ಮುಖಾಂತರ ವಿವಿಧ ಸಮುದಾಯದ ಮುಖಂಡರು ಪೂಜ್ಯರಿಗೆ ಹೂ ಹಾರ, ಶಾಲುಗಳಿಂದ ಭವ್ಯ ವಾಗಿ ಸ್ವಾಗತಿಸಿದರು.




















