ಕಲ್ಬುರ್ಗಿ: ಅ.13:ಭಾರತ ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದು ಲಾಭದಾಯಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಅನೇಕ ದುಶ್ಚಟಗಳತ್ತ ವಾಲುತ್ತಿದೆ, ಇದು ದೇಶಕ್ಕೆ ಮಾರಕವಾಗಿದ್ದು, ಯುವಜನರ ಪ್ರಗತಿಯೇ ದೇಶದ ಉನ್ನತಿ ಎಂದು ಶ್ರೀ ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶಿವಶರಣಪ್ಪ ಚನ್ನೋರ್ ಹೇಳಿದರು.
ಅವರು ಕಲಬುರ್ಗಿ ನಗರದ ಜೇವರ್ಗಿ ಕ್ರಾಸ್ ಹತ್ತಿರ ಇರುವ ಚನ್ನಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿ ಪಾಲಕರು ಹಾಗೂ ಉಪನ್ಯಾಸಕರ ಕೈಯಲ್ಲಿದೆ. ಎಲ್ಲ ಮಕ್ಕಳಿಗೂ ಒಂದೇ ತೆರನಾದ ಬುದ್ದಿಮತ್ತೆ ಇರುತ್ತದೆ. ಆದರೆ, ಅವರು ಬೆಳೆಯುವ ವಾತಾವರಣ, ಅವರಿಗೆ ಸಿಗುವ ಶಿಕ್ಷಣದ ಆಧಾರದ ಮೇಲೆ ಆತನ ಜೀವನ ರೂಪಗೊಳ್ಳುತ್ತದೆ, ಶಿಸ್ತು, ಸಮಯಪ್ರಜ್ಞೆ, ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ, ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಭಾಗವಾಗಿದ್ದು, ಇದು ಅವರಿಗೆ ಜ್ಞಾನಾರ್ಜನೆ ಮಾಡಲು ಭವಿಷ್ಯ ರೂಪಿಸಲು ಸಹಾಯ ಮಾಡುತ್ತದೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳು ಅವರ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಸ್ತು, ಸಮಯ ಪ್ರಜ್ಞೆ, ನಿರಂತರ ಅಧ್ಯಯನದಿಂದ ಜೀವನದಲ್ಲಿ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಸರಿಯಾದ ಆಹಾರ ಕ್ರಮ, ವ್ಯಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯವನ್ನು ಹೊಂದಬೇಕು,
ಪಾಲಕರು ಮಕ್ಕಳ ಜೀವನ ಕ್ರಮವನ್ನು ಅವಲೋಕಿಸಿ ಅವರನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಪ್ರೇರೆಪಿಸಬೇಕು. ವಿದ್ಯಾರ್ಥಿಗಳು ಸುಳ್ಳು, ಸೋಮಾರಿತನವನ್ನು ಬಿಟ್ಟು ಸತ್ಯವನ್ನು ಮಾತನಾಡುವುದನ್ನು, ಸರಿಯಾದ ಅಧ್ಯಯನ ಕ್ರಮವನ್ನು ರೂಢಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ. ದೇವಿಂದ್ರಪ್ಪ ವಿಶ್ವಕರ್ಮ, ಅರುಣ್ ಕುಮಾರ್ ತವಡೆ, ಡಾ. ಸರಸ್ವತಿ, ಡಾ. ಕೀರ್ತಿ ಸೇರಿ ಮುಂತಾದವರು ಹಾಜರಿದ್ದರು.
























