
ಆಳಂದ: ಮೇ.26:ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳಿಂದಲೇ ದೇಶದಲ್ಲಿ ಸಮಾನತೆ, ಸಹೋದರತೆ ಮತ್ತು ಸಮೃದ್ಧಿ ಸಾಧ್ಯವಾಗುತ್ತದೆ ಎಂದು ಮಂಡರಗಿ ತೋಂಟದಾರ್ಯ ಮಠ ಹಾಗೂ ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಸಮಾಜವನ್ನು ಗುಲಾಮಗಿರಿಯಲ್ಲಿ ಇಡಲು ಬಯಸುವ ಬಂಡವಾಳಶಾಹಿ ಮತ್ತು ಪಟಭದ್ರ ಹಿತಾಸಕ್ತಿಗಳ ಕಪ್ಪಿಮುಷ್ಟಿಯಿಂದ ಹೊರಬರಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಾರ್ಗವನ್ನು ಜನರು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ತಾಲೂಕಿನ ಹೋಬಳಿ ಕೇಂದ್ರ ನರೋಣಾ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಹಾಗೂ ಡಿಎಸ್‍ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇನ್ನೂ ಅಂಧಶ್ರದ್ಧೆ, ಮೂಢನಂಬಿಕೆ ಮತ್ತು ಕಂದಾಚಾರಗಳು ಜನರ ಮನಸ್ಸನ್ನು ಕತ್ತಲೆಯಲ್ಲೇ ಇಟ್ಟುಕೊಂಡಿವೆ. ದೇವರನ್ನು ಮನುಷ್ಯರೇ ಸೃಷ್ಟಿಸಿದ್ದಾರೆ. ಆದರೆ ತಂದೆ-ತಾಯಿಯಂತಹ ನಿಜವಾದ ದೇವರನ್ನು ಮರೆತು ಮೂಢನಂಬಿಕೆಗಳ ಹಿಂದೆ ಓಡುವುದು ವಿμÁದನೀಯ ಸಂಗತಿ ಎಂದು ಹೇಳಿದರು. ಶಿಕ್ಷಣವೇ ಮನುಷ್ಯನ ಬದುಕನ್ನು ಬದಲಾಯಿಸುವ ಮಹಾಶಕ್ತಿ. ಪ್ರತಿಯೊಬ್ಬ ಪೆÇೀಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಗೌತಮ ಬುದ್ಧರು ರಾಜಮನೆತನದಲ್ಲಿ ಜನಿಸಿದರೂ ಜನಸಾಮಾನ್ಯರ ನೋವು-ನಲಿವು ಅರಿತು ಮಾನವೀಯ ಮೌಲ್ಯಗಳನ್ನು ಬೋಧಿಸಿದರು. ಬಸವಣ್ಣನವರು ಆರ್ಥಿಕ ಸಚಿವರಾಗಿದ್ದರೂ ಜನಪರ ಆಡಳಿತ ನಡೆಸಿ ಸಮಾನತೆಯ ಸಂದೇಶ ಸಾರಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಧ್ವನಿಯಾಗಿ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಹೊಸ ಚಿಂತನೆ ಮೂಡಿಸಿದರು. ಇಂತಹ ಮಹನೀಯರ ತತ್ವಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮಹಾಸ್ವಾಮಿಗಳು ಹೇಳಿದರು.
ಜನರು ಇನ್ನೂ ಅನೇಕ ಮೂಢನಂಬಿಕೆಗಳಲ್ಲಿ ಸಿಲುಕಿರುವುದನ್ನು ಉಲ್ಲೇಖಿಸಿದ ಅವರು, “ಮನೆಗೆ ಹೊರಡುವಾಗ ನರಿಮುಖ ಕಂಡರೆ ಶುಭ ಎಂದು ಹೇಳುತ್ತಾರೆ. ಆದರೆ ಅದೇ ನರಿ ಅಡ್ಡ ಬಂದರೆ ಅಪಶಕುನ ಎಂದು ನಂಬುತ್ತಾರೆ. ಹೀಗಾದರೆ ನರಿಯನ್ನೇ ಸಾಕುಪ್ರಾಣಿಯಾಗಿ ಏಕೆ ಸಾಕುವುದಿಲ್ಲ? ಇಂತಹ ಅಂಧನಂಬಿಕೆಗಳು ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತವೆ” ಎಂದು ಪ್ರಶ್ನಿಸಿದರು. ಜನರು ಇಂತಹ ಮಢ್ಯಗಳಿಂದ ಹೊರಬಂದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಗುರು ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಸಂದೇಶಗಳು ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಬೆಳೆಸುವ ಮಹತ್ವದ ಚಿಂತನೆಗಳಾಗಿವೆ. ಯುವಜನತೆ ಈ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿಎಸ್‍ಎಸ್ ರಾಜ್ಯ ಸಂಚಾಲಕ ಡಾ. ಡಿ.ಜಿ. ಸಾಗರ ಅವರು, ಹಲವು ವರ್ಷಗಳಿಂದ ನರೋಣಾ ಗ್ರಾಮದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜಯಂತಿಗಳನ್ನು ಭಾವೈಕ್ಯತೆಯಿಂದ ಆಚರಿಸಲಾಗುತ್ತಿದೆ. ಈ ಭಾಗದ ಜನರು ಮಹನೀಯರ ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ ಪ್ರತಿವರ್ಷ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್.ಪಿ. ಸುಳ್ಳದ, ಬಾಬುರಾವ್ ವಾಲಿ, ಜಿಪಂ ಮಾಜಿ ಸದಸ್ಯ ಚಂದ್ರಕಾಂತ ಸಂಗೋಳಗಿ, ಸುರೇಶ ಹಾದಿಮನಿ, ಬಿ.ಸಿ. ವಾಲಿ, ಬಸವರಾಜ ಚಕ್ಕಿ, ನಿವೃತ್ತ ಎಇಇ ಅಶೋಕ ಅಂಬಲಗಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಮಾರಂಭದುದ್ದಕ್ಕೂ ದಲಿತ ಕಲಾಮಂಡಳಿಯ ಕ್ರಾಂತಿಕಾರಿ ಹಾಗೂ ಜಾಗೃತಿ ಗೀತೆಗಳು ಜನಮನ ಸೆಳೆದವು. ಅಂಬಣ್ಣಾ ಜೀವಣಗಿ ಹಾಗೂ ರಘುನಾಥ ಬಾಯಿ ಅವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.






















