ಇಡೀ ಸಮಾಜಕ್ಕೆ ಗುರುವಾಗಿ ಪತ್ರಿಕಾ ಮಾಧ್ಯಮ ನಿಂತಿದೆ : ಓಂಪ್ರಕಾಶ ದಡ್ಡೆ

ಔರಾದ್ : ಅ.2:ಸಮಾಜದಲ್ಲಿ ಅಧರ್ಮ, ಅನೀತಿ, ಭ್ರಷ್ಟಾಚಾರ ತಾಂಡವವಾಡುವಾಗ ಆ ಸಮಾಜವನ್ನು ಶುಚಿಗೊಳಿಸುವ ಕಾರ್ಯ ಪತ್ರಿಕಾರಂಗ ಮಾಡುತ್ತಿದೆ ಇಡೀ ಸಮಾಜಕ್ಕೆ ಗುರುವಾಗಿ ಪತ್ರಿಕಾ ಮಾಧ್ಯಮ ನಿಂತಿದೆ ಎಂದು ಸಾಹಿತಿ ಓಂಪ್ರಕಾಶ ದಡ್ಡೆ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು ಹೇಗೆ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಭಗವಂತ ಅವತಾರ ತಾಳಿ ಸೃಷ್ಟಿಯನ್ನು ಕಾಪಾಡುತ್ತಾನೆಯೋ ಹಾಗೆ ಸಮಾಜದಲ್ಲಿ ಅನ್ಯಾಯ, ಭ್ರಷ್ಟಾಚಾರ, ಅನಾಚಾರಗಳ ವಿರುದ್ಧ ಧ್ವನಿ ಎತ್ತಿ ಸಮಾಜ ಶುದ್ಧಿಗೆ ಪತ್ರಿಕಾ ರಂಗ ಕೆಲಸ ಮಾಡುತ್ತಾ ಬಂದಿದೆ, ಪತ್ರಕರ್ತರು ಸಹ ತಮ್ಮ ಜೀವನವನ್ನು ತ್ಯಾಗ ಮಾಡುವ ಮೂಲಕ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿದ್ದಾರೆ ಪತ್ರಕರ್ತರ ಲೇಖನಿಗೆ ದೊಡ್ಡ ಶಕ್ತಿ ಇದೆ, ಪತ್ರಿಕಾ ಜವಾಬ್ದಾರಿ ಶ್ರೇಷ್ಠವಾದದ್ದು, ಜಾತಿಗೆ ಒಬ್ಬ ಗುರು ಇದ್ದರೆ, ಪತ್ರಿಕಾ ಮಾಧ್ಯಮ ಇಡೀ ಸಮಾಜಕ್ಕೆ ಗುರುವಾಗಿ ನಿಂತಿದೆ ಎಂದು ತಿಳಿಸಿದರು.

ಪತ್ರಕರ್ತ ಅನಿಲಕುಮಾರ ದೇಶಮುಖ ಮಾತನಾಡಿ ಪತ್ರಕರ್ತರನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳದೆ ಅವರನ್ನು ಗೌರವಿಸುವ ಕಾರ್ಯ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಶ್ಲಾಘನೀಯವಾದ್ದು, ಪತ್ರಕರ್ತರು ಸಹ ಜವಾಬ್ದಾರಿ ಹೊತ್ತು ಸಮಾಜದ ಒಳಿತಿಗಾಗಿ ಕಾರ್ಯ ಮಾಡಬೇಕು. ಇವತ್ತು ಸನ್ಮಾನ ಆಗಿದೆ ಅಂದ್ರೆ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ ಅಂತ ತಿಳಿಯಬೇಕು ಅದರಂತೆ ನಾವು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಂಡು ಅಧ್ಯಯನಶೀಲರಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ ಗದಗ ವೀರೇಶ್ವರ ಪುಣ್ಯಾಶ್ರಮದ ವೇದಮೂರ್ತಿ ನವೀನ ಶಾಸ್ತ್ರಿಗಳು ಮಾತನಾಡಿ ಗಡಿಯಲ್ಲಿ ನಿಂತ ಯೋಧರು ದೇಶವನ್ನು ಕಾಯುತ್ತಾರೆ ಅದೇ ರೀತಿ ಸಮಾಜದಲ್ಲಿ ನಿಂತ ಪತ್ರಕರ್ತರು ಸಮಾಜವನ್ನು ಕಾಪಾಡುತ್ತಾರೆ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಪತ್ರಿಕಾಂಗ ಶ್ರೇಷ್ಠವಾದದ್ದು ಎಂದರು. ಈ ವೇಳೆ ತಾಲೂಕಿನ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಮಿತ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ ಸಂಗಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಶರಣಪ್ಪ ಚಿಟಮೇ, ಕನ್ನಡಪರ ಹೋರಾಟಗಾರ ಬಸವರಾಜ ಶೆಟಕಾರ, ಅಶೋಕ ರೆಡ್ಡಿ, ಕಿರಣ ಉಪ್ಪೆ, ಶಿವಕುಮಾರ ಕುಪ್ತೆ ವೀರೇಶ ಅಲ್ಮಾಜೆ, ಕರವೇ ಅಧ್ಯಕ್ಷ ಅನಿಲ ದೇವಕತೆ, ಬಸ್ಸು ಚೌಕಂಪಳ್ಳೆ, ರಾಹುಲ, ಭೀಮ್, ನವೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪತ್ರಕರ್ತ ಅಮರಸ್ವಾಮಿ ಸ್ಥಾವರಮಠ ನಿರೂಪಿಸಿದರು, ಅಂಬಾದಾಸ ನಳಗೆ ಸ್ವಾಗತಿಸಿ ವಂದಿಸಿದರು.