ಬೆಂಗಳೂರು, ಅ. ೩೧- ಬೆಂಗಳೂರಿಗೆ ಮೃತ್ಯುಕೂಪಗಳಾಗಿರುವ ರಸ್ತೆಗುಂಡಿಗಳನ್ನು ಮುಚ್ಚಲು ನೀಡಿದ್ದ ಡೆಡ್‌ಲೈನ್ ಯಾವ ತಾರೀಖಿಗೆ ಮುಗಿಯುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ನೆನಪಿದೆಯೇ. ಇವತ್ತು ಯಾವ ತಾರೀಖು ಎಂಬುದು ಗೊತ್ತಿದೆಯೇ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ರಸ್ತೆಗುಂಡಿ ಮುಚ್ಚುವ ಗಡುವು ಇಂದಿಗೆ ಮುಗಿದಿದ್ದರೂ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆಕಾಸಿನ ಕಿಮ್ಮತ್ತೂ ಕೊಡುತ್ತಿಲ್ಲ. ಇದೊಂದು ನಾಲಾಯಕ್ ಸರ್ಕಾರ. ಜನ ಈ ಸರ್ಕಾರಕ್ಕೆ ಛೀ.. ಥೂ.. ಎಂದು ಉಗಿಯುತ್ತಿದ್ದಾರೆ. ಶಾಪ ಹಾಕುತ್ತಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಕರ್ನಾಟಕವನ್ನು ಉಳಿಸಿ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಕಾನೂನು ತಿದ್ದುಪಡಿಯಿಂದ ಮೈಕ್ರೋ ಫೈನಾನ್ಸ್ ಹಾವಳಿ ನಿಲ್ಲುವುದಿಲ್ಲ ಎಂದು ನಾನು ಮಾರ್ಚ್ ತಿಂಗಳಲ್ಲೇ ವಿಧಾನಸಭೆಯಲ್ಲಿ ಹೇಳಿದ್ದೆ. ಈಗ ಅದು ಸಾಬೀತಾಗಿದೆ. ಮುಖ್ಯಮಂತ್ರಿಯವರ ತವರು ಜಿಲ್ಲೆಯಾದ ಮೈಸೂರಿನ ನಂಜನಗೂಡಿನ ಕಂದೆಗಾಲ ಗ್ರಾಮದಲ್ಲಿ ಮೈಕ್ರೋಫೈನಾನ್ಸ್ ಕಂಪೆನಿಯವರು ರೈತರ ಮನೆಗೆ ಬೀಗ ಜಡಿದು ಜಪ್ತಿ ಮಾಡಿರುವ ಘಟನೆ ನಡೆದಿದೆ. ಮೈಕ್ರೋ ಫೈನಾನ್ಸ್‌ನವರ ಹಾವಳಿಯಿಂದ ರೈತರು, ಬಡವರನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದಾರೆ.
ಬೆಂಗಳೂರಿನಲ್ಲಿ ಮಾತೆತ್ತಿದ್ದರೆ ಸುರಂಗ ರಸ್ತೆ, ಸ್ಕೈಡೆಗ್, ಬ್ರ್ಯಾಂಡ್ ಬೆಂಗಳೂರು ಎಂದೆಲ್ಲಾ ದೊಡ್ಡ ದೊಡ್ಡ ಮಾತುಗಳನ್ನಾಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೊಗಳೆ ಬಿಡುತ್ತಿದ್ದಾರೆ. ಪಾಲಿಕೆಯ ಶಿಕ್ಷಕರಿಗೆ ೬ ತಿಂಗಳಿನಿಂದ. ಪಾಲಿಕೆಯ ಕಿರಿಯ ಆರೋಗ್ಯಾಧಿಕಾರಿಗಳಿಗೆ ೮ ತಿಂಗಳಿನಿಂದ, ಪಾಲಿಕೆಯ ಸ್ಮಶಾನ ಸಿಬ್ಬಂದಿಗೂ ೮ ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಮೊದಲು ಪಾಲಿಕೆಯ ನೌಕರರಿಗೆ ಸರಿಯಾಗಿ ಸಂಬಳ ಕೊಡಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್‌ಗಾಂಧಿಯವರ ಜೋಳಿಗೆ ತುಂಬಿಸಿ ಮುಖ್ಯಮಂತ್ರಿ ಕುರ್ಚಿ ಗಿಟ್ಟಿಸಿಕೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಎಷ್ಟು ಸುಲಿಗೆ ಟಾರ್ಗೆಟ್ ಕೊಟ್ಟಿದ್ದೀರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೇ. ಮರಣೋತ್ತರ ಪರೀಕ್ಷೆ, ಮರಣ ಪ್ರಮಾಣ ಪತ್ರ, ಅಂತ್ಯಸಂಸ್ಕಾರ ಎಲ್ಲದಕ್ಕೂ ಲಂಚ. ನಿಮ್ಮ ಕುರ್ಚಿ ಆಸೆಗೆ ಜನಸಾಮಾನ್ಯರ ರಕ್ತ ಇನ್ನೆಷ್ಟು ಹೀರುತ್ತೀರಿ ಎಂದು ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.



























