ಅಭಿವೃದ್ಧಿ, ಸಾಮಾಜಿಕ ನ್ಯಾಯ ಕೇಂದ್ರದ ನಿಲುವು

ನವದೆಹಲಿ, ಜ.೨೮ : ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಿದ್ದು, ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದರು. ಎಲ್ಲರನ್ನೊಳಗೊಂಡ ಅಭಿವೃದ್ಧಿ, ಸಾಮಾಜಿಕ ನ್ಯಾಯ ಕೇಂದ್ರ ಸರ್ಕಾರದ ದೂರದೃಷ್ಟಿಯ ನಿಲುವು ಎಂದು ಅವರು ತಿಳಿಸಿದರು.


ಕಳೆದ ವರ್ಷ ದೇಶದ ವೇಗದ ಪ್ರಗತಿ ಮತ್ತು ಶ್ರೀಮಂತ ಪರಂಪರೆಯನ್ನು ಆಚರಿಸಲಾಯಿತು ಎಂದು ತಮ್ಮ ಭಾಷಣ ಆರಂಭಿಸಿದ ಅವರು, ವಂದೇ ಮಾತರಂ ಗೀತೆಯ ೧೫೦ನೇ ವರ್ಷವನ್ನು ದೇಶಾದ್ಯಂತ ಆಚರಿಸುವ ಮೂಲಕ ಬಂಕಿಮ್ ಚಂದ್ರ ಚಟರ್ಜಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಬಿರ್ಸಾ ಮುಂಡಾ ಅವರ ೧೫೦ನೇ ಜನ್ಮ ದಿನಾಚರಣೆ, ಸರ್ದಾರ್ ಪಟೇಲರ ೧೫೦ನೇ ಜನ್ಮ ದಿನಾಚರಣೆ, ತೇಜ್ ಬಹದ್ದೂರ್ ಜೀ ಅವರ ೩೫೦ನೇ ಶಹೀದ್ ದಿವಸ್ ಆಚರಣೆಯ ಮೂಲಕ ತಮ್ಮ ಪೂರ್ವಜರ ಕೊಡುಗೆಗಳನ್ನು ಸ್ಮರಿಸಿದೆ. ಈ ಆಚರಣೆಗಳು ಹೊಸ ಪೀಳಿಗೆಗೆ ಸ್ಫೂರ್ತಿ ತುಂಬಿವೆ. ಇದು ವಿಕಸಿತ ಭಾರತದತ್ತ ನಮ್ಮ ಪ್ರಯಾಣವನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ಹೇಳಿದರು.


ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒತ್ತಿ ಹೇಳಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕನೂ ಯಾವುದೇ ತಾರತಮ್ಯವಿಲ್ಲದೆ ತಮ್ಮ ಸಂಪೂರ್ಣ ಹಕ್ಕುಗಳನ್ನು ಪಡೆಯಬೇಕು. ನನ್ನ ಸರ್ಕಾರ ನಿಜವಾದ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಇದರ ಪರಿಣಾಮವಾಗಿ ಕಳೆದ ದಶಕದಲ್ಲಿ ಸುಮಾರು ೨೫ ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಬಡವರನ್ನು ಸಬಲೀಕರಣಗೊಳಿಸುವ ಪ್ರಯತ್ನ ಸರ್ಕಾರದ ಮೂರನೇ ಅವಧಿಯಲ್ಲಿ ಮತ್ತಷ್ಟು ಚುರುಕು ಪಡೆದಿದೆ ಎಂದರು.


ನಮ್ಮ ಸರ್ಕಾರ ದಲಿತರು, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮುದಾಯ ಸೇರಿದಂತೆ ಎಲ್ಲರಿಗಾಗಿಯೂ ಕೆಲಸ ಮಾಡುತ್ತಿದೆ. ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬ ದೂರದೃಷ್ಟಿ ಪ್ರತಿ ನಾಗರಿಕನ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ. ೨೦೧೪ರ ಆರಂಭದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳು ೨೫ ಕೋಟಿ ನಾಗರಿಕರನ್ನು ತಲುಪಿವೆ. ಇದರ ಜತೆಗೆ ಸರ್ಕಾರದ ಪ್ರಯತ್ನದೊಂದಿಗೆ ಈ ಯೋಜನೆ ಇದೀಗ ೯೫ ಕೋಟಿ ಭಾರತೀಯರಿಗೆ ಲಭ್ಯವಿದೆ ಎಂದು ತಿಳಿಸಿದರು.


ಇದೇ ವೇಳೆ ಮನೇರಗಾ ಬದಲಾಗಿ ನೂತನವಾಗಿ ತಂದಿರುವ ವಿಬಿ-ಜಿರಾಮ್ ಜಿ ಕಾಯ್ದೆಯ ಕುರಿತು ಮಾತನಾಡುತ್ತಿದ್ದಂತೆ ಆಡಳಿತ ಪಕ್ಷದ ಸಂಸದರು ಮೇಜು ಕುಟ್ಟಿ ಸಂಭ್ರಮಿಸಿದರು. ವಿರೋಧ ಪಕ್ಷದ ಸಂಸದರು ಎದ್ದು ನಿಂತು ಪ್ರತಿಭಟಿಸಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.


ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಅಭಿವೃದ್ಧಿ ಮತ್ತು ವಿಕಸಿತ ಭಾರತಕಕ್ಕಾಗಿ ಜಿ ರಾಮ್ ಜಿ ಕಾನೂನು ರಚಿಸಲಾಗಿದೆ. ಇದು ಹಳ್ಳಿಗಳಲ್ಲಿ ೧೨೫ ದಿನಗಳ ಉದ್ಯೋಗ ಖಾತರಿಯನ್ನು ಜನರಿಗೆ ನೀಡುತ್ತದೆ ಎಂದರು.


೨೦೨೬ರ ಮೂಲಕ ನಾವು ೨೧ನೇ ಶತಮಾನದ ಎರಡನೇ ಹಂತ ಪ್ರವೇಶಿಸಿದ್ದು, ಕಳೆದ ೨೫ ವರ್ಷಗಳ ಸಾಧನೆಗಳು ವಿವಿಧ ಕ್ಷೇತ್ರಗಳಲ್ಲಿ ಬಲವಾದ ಅಡಿಪಾಯ ಹಾಕಿವೆ. ಇದು ವಿಕಸಿತ ಭಾರತದತ್ತ ಪ್ರಯಾಣದ ನಿರ್ಣಾಯಕ ಅಡಿಪಾಯವಾಗಿದೆ ಎಂದರು. ಈ ಬಾರಿ ಬಜೆಟ್ ಅಧಿವೇಶನ ೬೫ ದಿನ ನಡೆಯಲಿದ್ದು, ಏಪ್ರಿಲ್ ೨ರಂದು ಕೊನೆಗೊಳ್ಳಲಿದೆ.