ಕುವೆಂಪು ನಾಡಿನ ಸಾಂಸ್ಕೃತಿಕ ಕ್ರಾಂತಿಯ ಹರಿಕಾರ

ಕೋಲಾರ,ಜ,೧೨-“ಕುವೆಂಪು ಅವರು ಕವಿ ಮಾತ್ರವಲ್ಲ, ಈ ನಾಡಿನ ಸಾಂಸ್ಕೃತಿಕ ಕ್ರಾಂತಿಯ ಹರಿಕಾರರು. ಅವರು ನೀಡಿದ ’ವಿಶ್ವಮಾನವ’ ಸಂದೇಶ ಇಂದಿನ ಅಸ್ತವ್ಯಸ್ತಗೊಂಡಿರುವ ಸಮಾಜಕ್ಕೆ ಔಷಧದಂತಿದ್ದು ನಮ್ಮ ಭಾಷೆಯನ್ನು ಗಟ್ಟಿಗೊಳಿಸಿದರು. ಎಲ್ಲಾ ಮನುಷ್ಯರು ಒಂದೇ, ಜಾತಿ, ವರ್ಣ, ಬೇದ ಸಲ್ಲದೆಂದು ಪ್ರತಿ ಪಾದಿಸಿದ ಸಮಾನತೆಯ ಸಾಮಾಜಿಕ ಚಿಂತಕರು ಎಂದು ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ತಿಳಿಸಿದರು.


ನಗರ ನಚಿಕೇತ ನಿಲಯದ ಬುದ್ದಮಂದಿರದಲ್ಲಿ ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಸುವರ್ಣಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕುವೆಂಪು ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ’ಜಾನಪದ ಗಾಯನ ಮತ್ತು ಸ್ವ-ಕವಿತೆ ವಾಚನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟಿ ಬೆಳೆಯುತ್ತಾ ಅಲ್ಪಮಾನವನಾಗಬಾರದು. ಸಮಾಜ ಕಟ್ಟಿರುವ ಜಾತಿ, ಧರ್ಮಗಳ ಗೋಡೆಗಳನ್ನು ಒಡೆದು ಹಾಕಿದಾಗ ಮಾತ್ರ ಮನುಷ ಮನುಷನನ್ನು ಪ್ರೀತಿಸಲು ಸಾಧ್ಯ. ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಮೌಢ್ಯತೆಯ ವಿರುದ್ಧ ಸಮರ ಸಾರಿದರು. ಮನುಜಮತ-ವಿಶ್ವಪಥ ಎಂಬ ಅವರ ಘೋಷಣೆಗಳು ಪ್ರತಿ ವಿದ್ಯಾರ್ಥಿಯ ಮನಸ್ಸಿನಲ್ಲಿ ಅಚ್ಚೊತ್ತಬೇಕು. ಯುವ ಜನಾಂಗವು ಕುವೆಂಪು ಅವರ ವೈಚಾರಿಕತೆಯನ್ನು ಕೇವಲ ಓದಿಗೆ ಸೀಮಿತಗೊಳಿಸದೆ, ತಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಇಂಥಹ ಕಾರ್ಯಕ್ರಮಗಳು ಅರ್ಥವಾಗುವುದು ಎಂದರು.


ಹಿರಿಯ ದಲಿತ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, “ಕುವೆಂಪು ಅವರು ತಮ್ಮ ಬರವಣಿಗೆಯ ಮೂಲಕ, ಕಥೆ ಮತ್ತು ಕವನಗಳ ಮೂಲಕ ಅಸ್ಪೃಶ್ಯತೆಯ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಪಣ ತೊಟ್ಟವರು. ದಲಿತರು ಮತ್ತು ಶೋಷಿತರ ನೋವುಗಳಿಗೆ ಅಕ್ಷರ ರೂಪ ನೀಡಿ ಅವರಿಗೆ ಆತ್ಮವಿಶ್ವಾಸ ತುಂಬಿದ ಮಹಾನ್ ಚೇತನ ಅವರು. ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಿದರು. ಕುವೆಂಪು ಅವರು ಬುದ್ಧನ ಕರುಣೆ, ಬಸವಣ್ಣನವರ ಸಮಾನತೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಿಕ ಆಶಯಗಳನ್ನು ಒಳಗೊಂಡಂತೆ ಬದುಕಿದವರು. ವೈಜ್ಞಾನಿಕ ಮನೋಭಾವನೆಯೇ ನಿಜವಾದ ಧರ್ಮವೆಂದು ನಂಬಿದ್ದ ಅವರು, ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ಸಾಮಾನ್ಯ ಜನರನ್ನು ಬಿಡುಗಡೆಗೊಳಿಸಲು ಶ್ರಮಿಸಿದರು. ಅವರ ತತ್ವಗಳನ್ನು ಅಪ್ಪಿಕೊಳ್ಳುವುದು ಎಂದರೆ ನಮ್ಮ ಅಸ್ಮಿತೆಯನ್ನು ಕಂಡುಕೊಳ್ಳುವುದು ಎಂದರ್ಥ, ಎಂದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ಗೀತೆ, ಸ್ವ-ಕವಿತೆ ವಾಚನ ಮಾಡಿದರು. ಜನಪದ ಗೀತೆ ಗಾಯನದಲ್ಲಿ ಬಿ.ವಿ.ಸೌದಾಮಿನಿ ಪ್ರಥಮ, ಗಂಗೋತ್ರಿ ದ್ವಿತೀಯ, ತೇಜಸ್ವಿನಿ ತೃತೀಯ, ಸ್ವ-ಕವಿತೆ ವಾಚನದಲ್ಲಿ ತೇಜಸ್ವಿನಿ ಪ್ರಥಮ, ಮಲ್ಲಿಕಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಬಂಗವಾದಿ ನಾರಾಯಣಪ್ಪ, ಸೀಪುರ ದೇವರಾಜ್, ನಾರಾಯಣಸ್ವಾಮಿ, ಜನಪದ ಹುಂಜ ಮುನಿರೆಡ್ಡಿ, ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಿ.ವೆಂಕಟಾಚಲಪತಿ, ಸುವರ್ಣಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕುಡುವನಹಳ್ಳಿ ಎನ್.ಗಣೇಶಪ್ಪ ಮತ್ತು ಕಲಾವಿದರು ಭಾಗವಹಿಸಿದ್ದರು.