ಜೀವ ಶಿವನಾಗುವ ಪರಿಯನ್ನು ತಿಳಿಸುವವನೇ ಸಾಕ್ಷಾತ ಪರಮಗುರು : ಖಾಸಮಠ ಶ್ರೀ

ಗುರುಮಠಕಲ್:ಅ.೧೪: ಕಂಡುದ ಹಿಡಿಯಲೊಲ್ಲದೆ ಕಾಣದುದ ಹಿಡಿದಿಹೆನೆಂದಡೆ, ಸಿಕ್ಕದೆಂಬ ಬಳಲಿಕೆಯ ನೋಡಾ. ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣುದುದ ಕಾಣಬಹುದು ಗುಹೇಶ್ವರಾ!! ಶರಣರ ವಾಣಿಯಂತೆ ಜಗದ ರಕ್ಷಕನು ಸಾಮನ್ಯ ಜನರಿಗೆ ಕಾಣಿಸುವದಿಲ್ಲ. ಏಕೆಂದರೆ ಆತನು ಇಂದ್ರಿಯಗಳನ್ನು ಮೀರಿದಾತನು. ನಿರ್ಗುಣ. ನಿರಾಕಾರ ಸ್ವರೂಪನು. ಪರಮಾತ್ಮನು ಕೇವಲ ಅನುಭಾವಕ್ಕೆ ದೊರಕುವನು. ಆದುದರಿಂದ ಶರಣರ ಮಾರ್ಗ ದರ್ಶನದಲ್ಲಿ ನಾವು ನಡೆದಾಗ ನಮಗೆ ಶರಣರು ಅಗೋಚರನಾದ ಸಾಕ್ಷಾತ್ ಪರಮಾತ್ಮನನ್ನು ಇಷ್ಟಲಿಂಗ ರೂಪದಲ್ಲಿ ನಮ್ಮ ಕರಸ್ಥಲಕ್ಕೆ ತಂದುಕೊಡುತ್ತಾರೆ. ಕೊನೆಗೆ ಸಾಕ್ಷಾತ್ ಶಿವನೇ ತಾನೆಂಬ ಶಿವನಿಂದ ಬೆರೆಯಿಲ್ಲ ಎಂಬ ಭಾವ ತಾಳುತ್ತಾನೆ. ನಂಬಿದ ಪರಮಭಕ್ತನಿಗೆ ಜೀವ ಶಿವನಾಗುವ ಪರಿಯನ್ನು ತಿಳಿಸುವವನೇ ಸಾಕ್ಷಾತ್ ಶ್ರೀ ಗುರುವು ಎಂದು ಗುರುಮಠಕಲ್ ಖಾಸಮಠದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು ಭಕ್ತರನ್ನು ಉದ್ದೇಶಿಸಿ ಆಶೀರ್ವಾದ ನುಡಿಗಳನ್ನಾಡಿದರು. ಶ್ರಾವಣ ಮಾಸದ ನಿಮಿತ್ಯವಾಗಿ ಸಿದ್ದಪ್ಪ ಆವಂಟಿ ಯಾನಗುಂದಿ ಇವರ ಮಹಾಮನೆಯಲ್ಲಿ ಪೂಜಾ ಪ್ರಸಾದವನ್ನು ಪೂಜ್ಯ ಶ್ರೀಗಳು ನಡೆಸಿಕೊಟ್ಟರು.ಭಕ್ತರು ಕಾರ್ಯಕ್ರಮದಲ್ಲಿ ಇದ್ದರು.