ದೇಶದ ಅಭಿವೃದ್ಧಿಗೆ ನೌಕಾಪಡೆಯ ಕೊಡುಗೆ ಅಪಾರ

ಕಲಬುರಗಿ :ಡಿ.4: ನೌಕಾಪಡೆಯು ದೇಶದ ಕರಾವಳಿ ಮತ್ತು ಸಮುದ್ರ ಗಡಿಗಳನ್ನು ರಕ್ಷಿಸುತ್ತದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುತ್ತದೆ. ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡುತ್ತದೆ. ಶತ್ರುಗಳಿಂದ ರಾಷ್ಟ್ರದ ಗಡಿಯನ್ನು ರಕ್ಷಿಸುವುದಲ್ಲದೆ, ಬಂದರು ಭೇಟಿಗಳು, ಜಂಟಿ ಸಮರಾಭ್ಯಾಸಗಳು ಮತ್ತು ಮಾನವೀಯ ನೆರವು ನೀಡುವ ಮೂಲಕ ಅಂತರರಾಷ್ಟ್ರೀಯ ಸಂಬಂಧಗಳನ್ನು ಬಲಪಡಿಸುವ ಮೂಲಕ ದೇಶದ ಅಭಿವೃದ್ಧಿಗೆ ನೌಕಾಪಡೆಯು ಅಪಾರವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಾಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ರಾಷ್ಟ್ರೀಯ ನೌಕಾಪಡೆ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ನೌಕಾಪಡೆಯು ಭಾರತೀಯ ರಕ್ಷಣಾ ಪಡೆಗಳ ನೌಕಾ ಅಂಗ. ಇದು ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2000 ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊಂದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಅದಿತಿ, ಆದಿತ್ಯ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.