
ಕಲಬುರಗಿ :ನ.29: ಸಿದ್ದಯ್ಯ ಪುರಾಣಿಕ ಅವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಉತ್ತಮ ಲೇಖಕ, ಆಡಳಿತಗಾರ ಮತ್ತು ಆಧುನಿಕ ವಚನಕಾರ. ‘ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಾಗಿ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ನಾಡು-ನುಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಶಿವಾ ವಿದ್ಯಾ ಮಂದಿರ ಶಾಲೆ’ಯಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸರಣಿ ಉಪನ್ಯಾಸ ಕಾರ್ಯಕ್ರಮ-25ರಲ್ಲಿ “ಕನ್ನಡ ನಾಡು-ನುಡಿಗೆ ಸಿದ್ದಯ್ಯ ಪುರಾಣಿಕರ ಕೊಡುಗೆ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪುರಾಣಿಕರು 35 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕೃತಿಗಳಲ್ಲಿ ‘ವಚನೋದ್ಯಾನ’ (ವಚನ ಸಂಕಲನ), ‘ತ್ರಿಭುವನಮಲ್ಲ’ (ಐತಿಹಾಸಿಕ ಕಾದಂಬರಿ), ‘ರಜತ ರೇಖೆ’ (ನಾಟಕ), ‘ಶರಣ ಚರಿತಾಮೃತ’ (ಜೀವನ ಚರಿತ್ರೆ) ಮತ್ತು ‘ತುಪ್ಪಾ ರೊಟ್ಟಿಗೇಗೇಗೇ’ (ಶಿಶು ಸಾಹಿತ್ಯ) ಸೇರಿವೆ. ‘ಗೋಕಾಕ್ ಚಳವಳಿ’ಯಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಕೆಲಸಕ್ಕಾಗಿ ಶ್ರಮಿಸಿದರು ಮತ್ತು ಅನೇಕ ಸಾಹಿತಿಗಳನ್ನು ಅಲ್ಲಿಗೆ ಆಹ್ವಾನಿಸಿದರು. ತಹಸೀಲ್ದಾರ್, ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ನಮ್ಮ ಕಲಬುರಗಿಯಲ್ಲಿ ಜರುಗಿದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದವರು ಎಂದು ಅವರ ಸಾಧನೆ-ಕೊಡುಗೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

























