Home ಜಿಲ್ಲೆ ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು : ಡಾ. ಸೋಮಶೇಖರ

ವೈದ್ಯ ವೃತ್ತಿ ಅತ್ಯಂತ ಪವಿತ್ರವಾದದ್ದು : ಡಾ. ಸೋಮಶೇಖರ

ಅಥಣಿ :ಮೇ.24: ವೈದ್ಯಕೀಯ ವೃತ್ತಿಯು ಅತ್ಯಂತ ಪವಿತ್ರವಾದದ್ದು. ಆರೋಗ್ಯವಂತ ಸಮಾಜವನ್ನು ಕಟ್ಟಲು ಮತ್ತು ಅಮೂಲ್ಯವಾದ ಆರೋಗ್ಯ ಸಂಪತ್ತನ್ನು ಕಾಪಾಡುವಲ್ಲಿ ವೈದ್ಯರ ಪಾತ್ರ ಅತ್ಯಂತ ಮಹತ್ವದಾಗಿದೆ. ವೈದ್ಯ ವೃತ್ತಿ ಕೇವಲ ಒಂದು ಉದ್ಯೋಗವಲ್ಲ , ಅದೊಂದು ಮಹಾನ್ ಸಮಾಜ ಸೇವೆಯಾಗಿದೆ ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ. ಸೋಮಶೇಖರ ಪಾಟೀಲ ಹೇಳಿದರು.
ಅವರು ಗುರುವಾರ ಪಟ್ಟಣದ ಹಲ್ಯಾಳ ರಸ್ತೆಗೆ ಹೊಂದಿಕೊಂಡಿರುವ ಕೆ ಎಂ ಸಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪುರಾತನ ಕಾಲದಿಂದಲೂ ವೈದ್ಯರ ಸೇವೆ ದೇವರ ಸಮಾನ ಎಂದು ಕರೆಯಲಾಗಿದೆ. ಅವರ ಶ್ರಮ ಮತ್ತು ನಿಸ್ವಾರ್ಥ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗದು, ರೋಗಿಗಳ ನೋವನ್ನ ತಮ್ಮ ನೋವು ಎಂದು ಭಾವಿಸಿ ತಮ್ಮ ನಿದ್ದೆ, ಹಸಿವು, ಸುಖವನ್ನ ತ್ಯಾಗ ಮಾಡಿ ನಿರಂತರ ರೋಗಿಗಳ ಸೇವೆಯಲ್ಲಿ ಇರುತ್ತಾರೆ. ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗು ಎರಡೂ ಜೀವಗಳು ಮುಖ್ಯವಾಗಿರುತ್ತದೆ. ಸಂಕಷ್ಟದಲ್ಲಿರುವ ಜೀವಗಳನ್ನ ರಕ್ಷಣೆ ಮಾಡುವುದರ ಜೊತೆಗೆ ರೋಗಿಗಳ ಮತ್ತು ಅವರ ಕುಟುಂಬದಲ್ಲಿ ಆಶಾಕಿರಣ ಮೂಡಿಸುವ ಕೆಲಸವನ್ನು ವೈದ್ಯರು ಮಾಡುತ್ತಾರೆ. ವೈದ್ಯರ ಜೊತೆಗೆ ನುರಿತ ಮತ್ತು ನಿರಂತರ ಸೇವೆ ಸಲ್ಲಿಸುವ ಸಿಬ್ಬಂದಿಗಳ ಸಹಕಾರದಿಂದ ವೈದ್ಯರಿಗೆ ಮತ್ತು ಆಸ್ಪತ್ರೆಗೆ ಒಳ್ಳೆಯ ಶ್ರೇಯಸ್ಸು ದೊರಕುತ್ತದೆ ಎಂದರು.
ಗ್ರಾಮೀಣ ಪ್ರದೇಶದ ರೈತನ ಮಗನಾಗಿ ಡಾ.ಸಂಜಯ ಕುರೆನ್ನವರ ನನ್ನ ಶಿಷ್ಯನಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ನಮ್ಮೆಲ್ಲರಿಗೆ ಹೆಮ್ಮೆ ಪಡುವಂತದ್ದು, ಅಥಣಿಯಲ್ಲಿ ಕೆಎಂಸಿ ಆಸ್ಪತ್ರೆ ಆರಂಭಿಸುವ ಮೂಲಕ ತಮ್ಮ ವೈದ್ಯಕೀಯ ಸೇವೆ ಆರಂಭಿಸಿರುವುದು ನನಗೆ ಸಂತಸ ತಂದಿದೆ. ಈ ಆಸ್ಪತ್ರೆಯ ಮೂಲಕ ಈ ಭಾಗದ ಜನರಿಗೆ ಉತ್ತಮ ಸೇವೆಗಳು ದೊರಕಲಿ ಎಂದು ಶುಭ ಹಾರೈಸಿದರು.
ಈ ವೇಳೆ ಕೆ ಎಂ ಸಿ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ
ವೈದ್ಯರಿಲ್ಲದ ಸಮಾಜವನ್ನು ನಾವು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅವರ ಸೇವೆ ಇಲ್ಲದೆ, ನಮ್ಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಜೀವನ ಸಾಧ್ಯವಿಲ್ಲ ಡಾ. ವಿಜಯ್ ಕುರೆನ್ನವರ ಹಾಗೂ ಡಾ.ಸಂಜಯ ಕುರೆನ್ನವರ ವೈದ್ಯಕೀಯ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ಮತ್ತು ಆರೋಗ್ಯ ಸೇವೆ ಜನ ಮೆಚ್ಚುಗೆ ಪಾತ್ರವಾಗಿದೆ.
ಅಥಣಿ ಭಾಗದ ಸಾರ್ವಜನಿಕರಿಗೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿ ಸಿಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಹೆರಿಗೆ ಚಿಕಿತ್ಸೆ ಸಿಗುವುದು ಅತ್ಯಗತ್ಯವಾಗಿದೆ. ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ಕಡು ಬಡವರಿಗೆ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದಿದ್ದರೆ ಅಂತಹ ರೋಗಿಗಳಿಗೆ ಉಚಿತ ಇಲ್ಲವಾದರೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕು. ಚಿಕಿತ್ಸಾ ವೆಚ್ಚ ಭರಿಸಲಾಗದ ಅಸಹಾಯಕ ಬಡ ರೋಗಿಗಳಿದ್ದರೆ ನಮಗೆ ನೇರವಾಗಿ ಸಂಪರ್ಕಿಸಿ ನಮ್ಮ ತಂದೆಯವರ ಹೆಸರಿನಲ್ಲಿ ಪ್ರಾರಂಭಿಸಿರುವ ‘ಶ್ರೀ ಲಕ್ಷ್ಮಣ ಸವದಿ ಫೌಂಡೇಶನ್’ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು,” ಎಂದು ಅವರು ಭರವಸೆ ನೀಡಿದರು.
ಅಥಣಿಯಲ್ಲಿ ಆರಂಭಗೊಂಡಿರುವ ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅತ್ಯುತ್ತಮ ಸೇವೆ ದೊರಕಲಿ. ಈ ಆಸ್ಪತ್ರೆಯ ವೈದ್ಯರಿಂದ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಗುಣಮಟ್ಟದ ಸೇವೆಗಳು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ನದಿ ಇಂಗಳಗಾವದ ಸಿದ್ದಲಿಂಗ ಸ್ವಾಮೀಜಿ, ಶೆಟ್ಟರ ಮಠದ ಮರುಳು ಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅಭಿಯಂತರರಾದ ರಾಜಶೇಖರ ಟೋಪಗಿ, ಖಲೀಲ ಜಾಲಿಹಾಳ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ನಿರ್ದೇಶಕ ಜಿ ಎಂ. ತೇವರಮನಿ, ಶಿವರುದ್ರ ಗೂಳಪ್ಪನವರ, ಸುರೇಶ್ ಮಾಯಣ್ಣವರ, ರಾಜೀವ ನಾಡಗೌಡ, ಎಸ್ ಆರ್ ಮಾಳಿ, ಮುರಿಗೆಪ್ಪ ಕುರೆನ್ನವರ, ಶೋಭಾ ಕುರೆನ್ನವರ, ಡಾ. ರಶ್ಮಿ ಕುರೆನ್ನವರ, ಡಾ. ಪ್ರೀತಿ ಕುರೆನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಸ್ ಆರ್ ಮಾಳಿ ಸ್ವಾಗತಿಸಿದರು. ಡಾ. ಸಂಜಯ ಕುರೆನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಹುದ್ದಾರ ನಿರೂಪಿಸಿದರು. ಡಾ. ವಿಜಯ ಕುರೆನ್ನವರ ವಂದಿಸಿದರು.