
ಕೋಲಾರ,ನ.೧೨-ಕಳೆದ ಎರಡೂವರೆ ವರ್ಷಗಳಿಂದ ನನ್ನ ವಿರುದ್ದ ಇಲ್ಲಸಲ್ಲದ ಚುನಾವಣಾ ಅಕ್ರಮಗಳ ಆರೋಪಗಳ ಅಪಪ್ರಚಾರದಲ್ಲಿ ತೊಡಗಿಸಿ ಕೊಂಡು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡರಿಗೆ ಮುಖಭಂಗ ಹಾಗೂ ಅಪಮಾನವಾಗಿದೆ ಎಂದು ಮಾಲೂರು ಶಾಸಕ ಕೆ.ವೈ. ನಂಜೇಗೌಡರು ತಿಳಿಸಿದರು.
ಮರು ಎಣಿಕೆ ಕಾರ್ಯ ಮುಗಿದ ನಂತರ ಹೊರಗೆ ಬಂದ ಶಾಸಕ ಕೆ.ವೈ. ನಂಜೇಗೌಡ ಮಾದ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅಂಚೆ ಮತದಾನದಲ್ಲಿ ಕಳೆದ ಬಾರಿಗಿಂತ ೩ ಮತಗಳು ಹೆಚ್ಚುವರಿಯಾಗಿ ಬಂದಿದ್ದು ಗೆಲುವಿನ ಅಂತರ ೨೪೮ ರಿಂದ ೨೫೧ಕ್ಕೆ ಏರಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಳೆಯಿಂದ ನಾನು ಹೊಸ ನಂಜೇಗೌಡನಾಗುತ್ತಿರುವೆ ನನ್ನ ವಿರೋಧಿ ಕೆ.ಎಸ್. ಮಂಜುನಾಥ್ ಗೌಡರ ಯಾವೂದೇ ಆರೋಪಗಳಿಗೆ ಇನ್ನು ಮುಂದೆ ನಾನು ಯಾವೂದೇ ರೀತಿ ಟೀಕೆಗಳ ಪ್ರತಿಕ್ರಿಯೆಗಳನ್ನು ವ್ಯಕ್ತ ಪಡೆಸುವುದಿಲ್ಲ. ಮುಂದಿನ ಎರಡೂವರೆ ವರ್ಷ ಶಾಂತಿ ನೆಮ್ಮದಿಯಿಂದ ನನ್ನ ಕ್ಷೇತ್ರದ ಅಭಿವೃದ್ದಿಯ ಆಡಳಿತ ನಿರ್ವಹಿಸಲು ನ್ಯಾಯಾಲಯವು ಮರು ಮತ ಎಣಿಕೆ ಮೂಲಕ ಶಾಸಕನಾಗಿ ಇನ್ನಷ್ಟು ಅಭಿವೃದ್ದಿಯ ಆಡಳಿತ ನಡೆಸಲು ಅವಕಾಶ ಕಲ್ಪಿಸಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ ಎಂದರು.
ಕಳೆದ ೨೦೨೩ರಲ್ಲಿ ಚುನಾವಣೆಯು ಕ್ರಮ ಬದ್ದವಾಗಿ ,ಪ್ರಮಾಣಿಕವಾಗಿ ನಡೆದಿದ್ದರೂ ಸಹ ಮತ ಎಣಿಕೆಯಲ್ಲಿ ಲೋಪ ದೋಷಗಳು, ಅಕ್ರಮಗಳು ನಡೆದಿದೆ ಎಂಬ ನನ್ನ ಪ್ರತಿಸ್ವರ್ಧಿ ಅಭ್ಯರ್ಥಿಯಾಗಿದ್ದ ಕೆ.ಎಸ್. ಮಂಜುನಾಥ್ ಗೌಡರ ಆರೋಪಗಳನ್ನು ಮಾಡಿ ಸುಪ್ರೀಂ ಕೋರ್ಟ್ ವರೆಗೂ ತಕಾರರು ಅರ್ಜಿಗಳನ್ನು ಸಲ್ಲಿಸಿದ್ದರು. ನನ್ನ ಮತ್ತು ನನ್ನ ಕುಟುಂಬದವರಿಗೆ ಮಾನಸಿಕವಾಗಿ ಹಿಂಸೆ ಹಾಗೂ ಸಾರ್ವಜನಿಕ ಹೇಳಿಕೆಗಳ ಮೂಲಕ ಅಪಮಾನಿಸಿದ್ದರು ಎಂದು ನೋವಿನಿಂದ ಹೇಳಿದರು.
ಅದರೆ ನನಗೆ ಸಂವಿಧಾನ ಬದ್ದ ನ್ಯಾಯಾಲಯವು ಮತ್ತು ಭಗವಂತ ನನಗೆ ನ್ಯಾಯ ದೊರಕಿಸಿ ಕೊಡುವ ಮೂಲಕ ನನಗೆ ಅಪಮಾನಿಸಿ, ಸುಳ್ಳು ಅರೋಪಗಳನ್ನು ಮಾಡಿದವರಿಗೆ ಮರು ಎಣಿಕೆಯಲ್ಲಿ ಸತ್ಯಾಂಶವನ್ನು ಪಾರದರ್ಶಕವಾಗಿ ಬಹಿರಂಗ ಪಡೆಸುವ ಮೂಲಕ ಮುಖ ಭಂಗವುಂಟು ಮಾಡಿದಂತಾಗಿದೆ ಎಂದು ತಿಳಿಸಿದರು.
ಮಂಜುನಾಥಗೌಡರನ್ನು ಹೊಸಕೋಟೆಯಿಂದ ಕರೆ ತಂದವನು ನಾನೇ, ಅವರನ್ನು ಶಾಸಕರನ್ನಾಗಿ ಮಾಡಿದವನು ಸಹ ನಾನೇ ಅದರೆ ರಾಜಕೀಯದಲ್ಲಿ ಕಾರಣಾಂತರಗಳಿಂದ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿ ಕೊಂಡ ನಂತರದಲ್ಲಿ ಕಳೆದ ಎರಡೂವರೆ ವರ್ಷಗಳಿಂದ ವಿನಾಕಾರಣ ನನಗೆ ಮತ್ತು ನನ್ನ ಕುಟುಂಬದವರ ಮನಸ್ಸಿನ ಶಾಂತಿಗೆ ಭಂಗವುಂಟು ಮಾಡಿ ಮಾನಸಿಕವಾಗಿ ಹಿಂಸೆ ನೀಡಿ, ಸುಳ್ಳು ಆರೋಪಗಳನ್ನು ಮಾಡುತ್ತಿದ್ದರು. ಇದಕ್ಕೆ ಈಗಾ ಕಡಿವಾಣ ಹಾಕಿದಂತಾಗಿದೆ. ಇನ್ನು ಮುಂದೆ ಇಂಥ ಕೀಳು ಮಟ್ಟದ ರಾಜಕಾರಣಕ್ಕೆ ಹೋಗದೆ ಗೌರವದ ರಾಜಕಾರಣ ಮಾಡಲಿ ಎಂದು ಕಿವಿ ಮಾತು ತಿಳಿಸಿದರು.
ಕ್ಷೇತ್ರದ ಜನತೆ ಯಾವೂದೇ ಅವೇಶಕ್ಕೆ ಒಳಗಾಗದೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.
ಸಂಜೆ ೫ ಗಂಟೆಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾಲೂರು ಕ್ಷೇತ್ರದ ಅಭಿಮಾನಿಗಳು ಶಾಸಕ ನಂಜೇಗೌಡರನ್ನು ಅಭಿನಂದಿಸುತ್ತಿದ್ದರು. ರಾತ್ರಿ ಮಾಲೂರಿನ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಿ ಸಂತಸ ಪಟ್ಟು ಸಿಹಿ ಹಂಚಿದರೆಂದು ವರದಿಯಾಗಿದೆ.




























