ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯೇ ಮುಖ್ಯ ಗುರಿ

ಬೀದರ್:ಸೆ.6: ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದೇ ನಮ್ಮ ಮುಂದಿನ ಮುಖ್ಯ ಗುರಿ ಎಂದು ಇತ್ತಿಚೀಗೆ ನಗರದ ಬಿ.ವಿ. ಭೂಮರಡ್ಡಿ ಕಾಲೇಜು ಮೈದಾನದಲ್ಲಿ ಕಿಕ್ಕಿರಿದು ಸೇರಿದ ಜನಸ್ತೋಮದ ನಡುವೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸ್ವಾಮೀಜಿಗಳು ಘೋಷಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕøತಿ ಅಭಿಯಾನದ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನಕ್ಕೆ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಅಪಾರ ಸಂಖ್ಯೆಯ ಶರಣ-ಶರಣೆಯರು ಆಗಮಿಸಿದ್ದರು. 237 ಮೇಣದ ಬತ್ತಿಗಳಿಂದ ಕೂಡಿದ ಬಸವ ಸಂಸ್ಕೃತಿ ಎಂದು ಕನ್ನಡದಲ್ಲಿ ಬರೆದಿದ್ದ ಅಕ್ಷರಗಳನ್ನು ಬೆಳಗಿಸಿ ಒಕ್ಕೂಟದ ಸ್ವಾಮೀಜಿಗಳು ಕಾರ್ಯಕ್ರಮ ಉದ್ಘಾಟಿಸಿದರು. ‘ಬಸವ ಸಂಸ್ಕೃತಿಯ ಪ್ರಕಾರವೇ ಬದುಕುತ್ತೇವೆ’ ಎಂಬ ಸಂಕಲ್ಪ ಮಾಡಿದರು.

ಅಭಿಯಾನ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಿಸಬೇಕೆಂಬ ಹತ್ತಾರು ವರ್ಷಗಳ ಬೇಡಿಕೆ ಈಡೇರಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಬೇಕು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಯಾವ ರೀತಿ ರಾಷ್ಟ್ರಮಟ್ಟದಲ್ಲಿ ಆಚರಿಸಲಾಗುತ್ತದೋ ಅದೇ ರೀತಿ ಬಸವಣ್ಣನವರ ಜಯಂತಿ ಕೂಡ ಆಚರಿಸಬೇಕು ಎಂದು ಹಕ್ಕೊತ್ತಾಯ ಮಾಡಿದರು.

ಬಳಿಕ ಮಾತನಾಡಿದ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಬೀದರ್ ಜಿಲ್ಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರುವ ಮೂಲಕ ಲಿಂಗಾಯತರ ಶಕ್ತಿ ಏನೆಂಬುದನ್ನು ತೋರಿಸಿದ್ದೀರಿ. ಇದೇ ಉತ್ಸಾಹ, ಹುಮ್ಮಸ್ಸಿನಿಂದ ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲೂ ಭಾಗವಹಿಸಬೇಕು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂಬ ನಮ್ಮ ಗುರಿ, ಕೂಗು ರಾಜ್ಯ, ರಾಷ್ಟ್ರಮಟ್ಟಕ್ಕೆ ಕೇಳಿಸಬೇಕು ಎಂದು ಹೇಳಿದರು.

ಸಾಣೇಹಳ್ಳಿ ತರಳಬಾಳು ಸಂಸ್ಥಾನ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಕೊಡಬೇಕೆಂಬ ಹಕ್ಕೊತ್ತಾಯ ಮಾಡೋಣ ಎಂದರು. ಇದಕ್ಕೆ ಇತರೆ ಸ್ವಾಮೀಜಿಗಳು ದನಿಗೂಡಿಸಿ, ಒಗ್ಗಟ್ಟು ಪ್ರದರ್ಶಿಸಿದರು.

ಬೆಳಗಾವಿ ಹಾರುಗೇರಿಯ ಸಾಹಿತಿ ವಿ.ಎಸ್. ಮಾಳಿ ಅವರು ‘ಅನುಭವ ಮಂಟಪ ಮಹಾಮನೆ’ ಕುರಿತು ಮಾತನಾಡಿ, ಬಸವಣ್ಣನವರು ಬಿಜ್ಜಳ ಅರಸನ ಅರಮನೆಗೆ ಪರ್ಯಾಯವಾಗಿ ಅನುಭವ ಮಂಟಪ ಎಂಬ ಮಹಾಮನೆ ಕಟ್ಟಿದರು. ಅದು ಭೌತಿಕ ಕಟ್ಟಡವಾಗಿರಲಿಲ್ಲ. ಚಿಂತನ-ಮಂಥನದ ಕೇಂದ್ರವಾಗಿತ್ತು. ಅಲ್ಲಿ ಎಲ್ಲರೂ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು. ನಿರಂಕುಶ ಆಡಳಿತದಲ್ಲಿ ಅರಸ ಕೈಗೊಳ್ಳುವಂತೆ ನಿರ್ಧಾರ ಕೈಗೊಳ್ಳುತ್ತಿರಲಿಲ್ಲ ಎಂದರು.

ಬಿಜ್ಜಳ ಸಾಮ್ರಾಜ್ಯ ವಿಸ್ತರಣೆಗೆ ಸೈನ್ಯ ಕಟ್ಟಿದರೆ, ಬಸವಣ್ಣ ಕಾಯಕ ಜೀವಿಗಳ ಸಂಘ ಕಟ್ಟಿದರು. ದೇವಾಲಯಕ್ಕೆ ಪರ್ಯಾಯವಾಗಿ ದೇಹವೇ ದೇಗುಲ ಎಂಬ ಅರಿವು ಮೂಡಿಸಿದರು. ವಿಶ್ವಮಾನ್ಯ ತತ್ವಗಳನ್ನು ಕೊಟ್ಟಿರುವ ಬಸವಣ್ಣನವರ ಸಂದೇಶಗಳು ಸದಾ ಪ್ರಸ್ತುತ ಎಂದು ಹೇಳಿದರು.

ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ, ಬೆಂಗಳೂರಿನ ಚನ್ನಬಸವಾನಂದ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಶಶೀಲ್ ಬಿ. ನಮೋಶಿ, ಪ್ರಮುಖರಾದ ಬಸವರಾಜ ಬುಳ್ಳಾ, ಬಾಬುವಾಲಿ, ಡಾ. ರಜನೀಶ ವಾಲಿ ಇದ್ದರು. ಸುವರ್ಣಾ ಧನ್ನೂರ ಅವರು ಬಸವ ಗುರುಪೂಜೆ ಮಾಡಿದರು. ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸುರೇಶಕುಮಾರ ಪಾಟೀಲ, ನವಲಿಂಗ ಪಾಟೀಲ ನಿರೂಪಿಸಿದರೆ, ರಾಜೇಂದ್ರ ಜೊನ್ನಿಕೇರಿ ವಂದಿಸಿದರು.