
ಹುಬ್ಬಳ್ಳಿ,ಜ.೨೭-ಕಳೆದ ಒಂದೂವರೆ ತಿಂಗಳಿಂದ ಮಹಾನಗರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಇರಿಸಲಾಗಿದ್ದ ಬೋನಿಗೆ ಬಿದ್ದಿದ್ದು,ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಡಿ.೧೭ ರಿಂದ ನಗರದ ವಿಮಾನ ನಿಲ್ದಾಣ, ಕಾರವಾರ ರಸ್ತೆ, ಸುತಗಟ್ಟಿ, ಗಾಮನಗಟ್ಟಿ, ಸತ್ತೂರು ಸೇರಿ ಹಲವಡೆ ನಾಲ್ಕೈದು ಬಾರಿ ಚಿರತೆ ಕಾಣಿಸಿಕೊಂಡು, ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಮೈಸೂರು, ಗದಗ, ಬೆಳಗಾವಿಯಿಂದ ಆಗಮಿಸಿದ್ದ ಅರಣ್ಯ ಇಲಾಖೆ ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದರೂ ಚಿರತೆ ಸೆರೆಯಾಗಿರಲಿಲ್ಲ.
ಚಿರತೆಯನ್ನು ಬೋನಿಗೆ ಬೀಳಿಸುವ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಆವರಣದಲ್ಲಿ ೩ ಸಾಮಾನ್ಯ ಹಾಗೂ ೧ ತುಮಕೂರು ಮಾದರಿ ವಿಶೇಷ ಬೋನನ್ನು (ಕೇಜ್) ಇರಿಸಲಾಗಿತ್ತು. ಅದರಂತೆ ಸತ್ತೂರಿನಲ್ಲಿ ಒಂದು ಬೋನ್ ಇಡಲಾಗಿತ್ತು. ಚಿರತೆಯ ಚಲನವಲನ ತಿಳಿಯಲು ವಿವಿಧ ಕಡೆಗಳಲ್ಲಿ ಒಟ್ಟು ೨೫ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಎರಡು ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಚಿರತೆ ಬಂದ ಮಾಹಿತಿ ಅರಿತ ಅರಣ್ಯ ಇಲಾಖೆಯ ತಂಡ ತುಮಕೂರು ಮಾದರಿಯ ಬೋನನ್ನು ಮೊದಲಿದ್ದ ಸ್ಥಳದಿಂದ ಬೇರೆ ಕಡೆ ಸ್ಥಳಾಂತರ ಮಾಡಿ, ಅದರಲ್ಲಿ ಪ್ರಾಣಿಯೊಂದನ್ನು ಹಾಕಿ ಚಿರತೆಗಾಗಿ ಕಾದು ಕುಳಿತಿದ್ದರು. ನಿನ್ನೆ ರಾತ್ರಿ ಆ ಪ್ರಾಣಿಯನ್ನು ತಿನ್ನಲು ಬಂದ ಚಿರತೆ ತುಮಕೂರು ಮಾದರಿ (ಕ್ರೇಸ್) ಬೋನ್‌ಗೆ ಬಿದ್ದಿದೆ.
ಬೋನಿನಲ್ಲಿ ಬಂಧಿಯಾದ ಚಿರತೆಯನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, ಅವರ ಅನುಮತಿ ಮೇರೆಗೆ ಇಂದು ಚಿರತೆ ಯನ್ನು ಕಾಡಿಗೆ ಬಿಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಹುಬ್ಬಳ್ಳಿ ವಲಯ ಅರಣ್ಯ ಅಧಿಕಾರಿ ಆರ್.ಎಸ್. ಉಪ್ಪಾರ ತಿಳಿಸಿದ್ದಾರೆ.
ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಸಿಎಫ್ ವಸಂತ ರೆಡ್ಡಿ, ಡಿಸಿಎಫ್ ಶೇಖ ಅಬ್ದುಲ್ ಸಿದ್ಧಿಖಿ ಸೇರಿದಂತೆ ಎಲ್ಲ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.
೩೮ ದಿನಕಾರ್ಯಾಚರಣೆ:
ಜ.೧೮ ರಿಂದ ಅರಣ್ಯ ಇಲಾಖೆಯ ತಂಡ ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿತ್ತು. ಅದಕ್ಕೆ ಪೂರಕವಾಗಿ ಬನ್ನೇರುಘಟ್ಟದ ನ್ಯಾಷನಲ್ ಪಾರ್ಕ್, ಮೈಸೂರು, ತುಮಕೂರು, ಗದಗ, ಬೆಳಗಾವಿಯಿಂದ ಚಿರತೆ ಹಿಡಿಯಲು ತಂಡಗಳನ್ನು ಕರೆ ತರಲಾಗಿತ್ತು. ರಾತ್ರಿಯ ಸಮಯದಲ್ಲಿ ಚಿರತೆಯನ್ನು ಪತ್ತೆ ಹಚ್ಚಲು ಥರ್ಮಲ್ ಡ್ರೋಣ ಕ್ಯಾಮರಾ ಬಳಸಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಮಹಾನಗರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.




























