ಮೈಸೂರು, ಅ. ೨೩- ಕಾಂಗ್ರೆಸ್ ಪಕ್ಷದವರೇ ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂದು ಪುತ್ರ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಫೋಟ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದದ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ ಪುತ್ರನ ಈ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡಿದೆ.
ಮೈಸೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ತೇಜೋವಧೆ ಮಾಡಲು ಹಾಗೂ ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಸಂಚು ರೂಪಿಸಲಾಗಿದೆ. ಈ ಸ್ಟಿಂಗ್ ಆಪರೇಷನ್‌ನಲ್ಲಿ ಕಾಂಗ್ರೆಸ್ ಪಕ್ಷದವರು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದರು.
ಈ ಸ್ಟಿಂಗ್ ವಿಡೀಯೋದಲ್ಲಿ ತಮ್ಮ ಪಕ್ಷದವರೇ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಪ್ರಕರಣದಲ್ಲಿ ಓರ್ವ ಮಾಧ್ಯಮ ಮುಖ್ಯಸ್ಥರು ಕಾಣಿಸಿಕೊಂಡಿರುವುದು. ವಿಡೀಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಪಕ್ಷವನ್ನು ದೂಷಿಸುವುದು ಸರಿಯಲ್ಲ ಎಂದರು.
ವಿಡೀಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿಯಿದೆ.
ರಾಜಕೀಯ ಲಾಭಕ್ಕಾಗಿ ಮತ್ತು ಸಿದ್ದರಾಮಯ್ಯ ಹೆಸರನ್ನು ಕೆಡಿಸಲು ಈ ರೀತಿ ಕೃತ್ಯಕ್ಕೆ ಮುಂದಾಗಿರುವುದು ಸ್ಪಷ್ಟವಾಗಿ ವಿಡೀಯೋದಲ್ಲಿ ಗೋಚರಿಸುತ್ತದೆ ಎಂದ ಅವರು, ಸಿದ್ದರಾಮಯ್ಯನವರ ಸುದೀರ್ಘ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಲು ಮತ್ತು ಬ್ಲಾಕ್‌ಮೇಲ್ ಮಾಡಲು ಈ ಯತ್ನ ನಡೆದಿದೆ ಎಂದು ಅವರು ಆರೋಪಿಸಿದರು.
ಇಂತಹ ಸುಳ್ಳು ಆರೋಪಗಳಿಂದ ಸಿದ್ದರಾಮಯ್ಯ ತೀವ್ರ ಬೇಸರಗೊಂಡಿದ್ದಾರೆ. ೪೦ ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕಳಂಕಕ್ಕೆ ಗುರಿಯಾಗಿರಲಿಲ್ಲ. ತಮ್ಮ ರಾಜಕೀಯ ಬದುಕಿನ ಅಂತಿಮ ಹಂತದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿ ಬಂದಾಗ ಯಾರಿಗಾದರೂ ಬೇಸರವಾಗುವುದು ಸಹಜ ಎಂದರು.
ಸತ್ಯ ನಮ್ಮ ಪರವಾಗಿದೆ. ತನಿಖೆಯ ಮೂಲಕ ಸತ್ಯ ಹೊರಬಂದು ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ ಎಂದು ತಾಯಿಯವರು ದೃಢವಾಗಿ ನಂಬಿದ್ದಾರೆ. ಯಾರು ಏನೇ ಆರೋಪ ಮಾಡಿದರೂ ಸತ್ಯ ಬರುವತನಕ ಇಂತಹ ಆರೋಪಗಳು ಎದರಿಸಲು ಸಿದ್ದವಿರುವುದಾಗಿ ಹೇಳಿದರು.
ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಬಂಧಿಸಬೇಕೆಂದು ನಮ್ಮ ತಂದೆಯವರು ಹೇಳಿದ್ದಾರೆ. ನಮ್ಮ ಸರ್ಕಾರದ ಮೇಲೆ ನಂಬಿಕೆಯಿದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಒಂದು ವೇಳೆ ತನಿಖೆ ಸಮರ್ಪಕವಾಗಿ ನಡೆಯದಿದ್ದರೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು.






















