
ಚಿಕ್ಕಬಳ್ಳಾಪುರ ,ಫೆ.೧೬ -ಲಂಬಾಣಿ ಸಮುದಾಯದ ಸಾಂಸ್ಕತಿಕ ,ಆರಾಧ್ಯದೈವ, ಚಾರಣಿಗ, ನಾಟಿ ವೈದ್ಯ ಭಾಯಾ ಈ ಲಂಬಾಣಿ ಸಮುದಾಯದಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಅವರು ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂತ ಸೇವಾಲಾಲ್ ಜಯಂತಿಯಲ್ಲಿ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಂಬಾಣಿ ಸಮುದಾಯ ಜನ ಸಾವಿರಾರು ವರ್ಷಗಳಿಂದ ಅರಣ್ಯ ವಾಸಿಗಳಾಗಿ ಜೀವನ ಸಾಗಿಸುತ್ತಿದ್ದರು. ಅವರನ್ನು ಮುಖ್ಯವಾಹಿನಿಗೆ ತರಲು ಅಜ್ಞಾನ ಅಂಧಕಾರಗಳನ್ನು ದೂರ ಮಾಡಿ ಜ್ಞಾನದ ಮಾರ್ಗ ತೋರಿದ ಕೀರ್ತಿ ಸಂತ ಸೇವಾಲಾಲರಿಗೆ ಸಲ್ಲುತ್ತದೆ ಎಂದರು.
ಪ್ರಧಾನ ಭಾಷಣಕಾರರಾದ ಬಾಗೇಪಲ್ಲಿಯ ಶ್ರೀರಾಮ್ ನಾಯಕ್ ಅವರು ಮಾತನಾಡಿ, ಸರ್ಕಾರ ಈಗಾಗಲೇ ೭ ಅಥವಾ ೮ ವರ್ಷದಿಂದ ಪ್ರತಿ ವರ್ಷ ಫೆಬ್ರವರಿ ೧೫ ಸಂತ ಸೇವಾಲಾಲ್ ಜಯಂತಿ ಆಚರಣೆ ಮಾಡುತ್ತಿವೆ. ಸೇವಾಲಾಲರು ಕ್ರಿ.ಶ ೧೭೩೯ ಫೆಬ್ರುವರಿ ೧೫ರ ಸೋಮವಾರ ದಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯ ಘಡ)ದಲ್ಲಿ ಜನಿಸಿದರು. ಸಾವಿರರು ವರ್ಷಗಳು ರಾಜರ ಸಂಸ್ಥಾನದಲ್ಲಿ ಲಂಬಾಣಿ ಸಮುದಾಯವರು ೫೦೦ಕ್ಕೂ ಹೆಚ್ಚಿನ ಸಂಸ್ಥಾನಗಳಿಗೆ ಕಾಡು ಹಾದಿಯಲ್ಲಿ ವ್ಯಾಪಾರ ಮಾಡುತ್ತಾ, ಅವರ ಸರಕು, ಆಹಾರ, ಧಾನ್ಯ, ಉಪ್ಪು, ಬೆಳ್ಳಿ, ಬಂಗಾರ ಸಾಮಾಗ್ರಿ, ಯುದ್ದ ಸಾಮಾಗ್ರಿ ಸಾಗಿಸಿ ಸ್ವಾತಂತ್ರ್ಯ ಹೋರಾಟದವರೆಗೂ ಸೇವೆಸಲ್ಲಿಸಿರುವ ಈ ಸಮುದಾಯ ಅನೇಕ ಪ್ರಥಮಗಳನ್ನು ನಾಡಿಗೆ ನೀಡಿದೆ. ಆರ್ಥಿಕತೆ, ಗೋಪಾಲನೆ, ಕಸೂತಿ, ಕಲೆ, ಮೊದಲ ಬೇಟೆಗಾರರು ಹೀಗೆ ನೂರಾರು ಪ್ರಥಮಗಳನ್ನು ಸಾಧಿಸಿದ ಶ್ರಮಿಕರು ಹಾಗೂ ಪ್ರಾಮಾಣಿಕರು ಹಾಗೂ ನಂಬಿಕಸ್ಥ ಸಿಪಾಯಿಗಳು ಲಂಬಾಣಿ ಸಮುದಾಯದವರು ಇವರಾಗಿದ್ದರು. ಹೀಗಾಗಿ ರಾಜರುಗಳ ವಜ್ರ, ವೈಡೂರ್ಯ ಸಾಗಿಸುವ ಸಂಚಾರಿಗಳಾಗಿದ್ದರು
ಲಂಬಾಣಿಕರ ಆರಾಧ್ಯ ದೈವ, ಸಾಮಾಜಿಕ ಹರಿಕಾರ, ಬುಡಕಟ್ಟು ದೈವ, ಐತಿಹಾಸಿಕ ವೀರಸೇನಾನಿ, ಸಾಮಾಜಿಕ ಚಿಂತಕ ತತ್ವಜ್ಞಾನಿ , ಬ್ರಹ್ಮಚಾರಿ, ಸಂತ ಸೇವಾಲಾಲ್ ಜನ್ಮದಿನವನ್ನು ಸರ್ಕಾರ ಇನ್ನೂ ವೈಷಿಷ್ಟವಾಗಿ ಆಚರಿಸಲು ಮುಂದಾಗಲಿ ಎಂದು ಆಶಿಸೋಣ ಎಂದರು.
ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಮುದಾಯದ ಮುಖಂಡರಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದರ್ ರಶ್ಮಿ, ಸಮುದಾಯದ ಮುಖಂಡರಾದ ಶ್ರೀನಿವಾಸ್ ಬಿ.ನಾಯಕ್, ಭೀಮಾನಾಯಕ್, ಟ ರಂಗೇನಾಯಕ್, ಮತ್ತು ಗೋಪಿನಾಯಕ್, ನರಸಿಂಹನಾಯಕ್, ಗಂಗಪ್ಪನಾಯಕ್,ಸಮುದಾಯದ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಸಮುದಾಯಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂಘದ ಎಲ್ಲಾ ಮುಖಂಡರು ಹಾಗೂ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
























