ಕೋಲಾರ, ಆ,೨೧-ಡಿ. ದೇವರಾಜ ಅರಸು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಹಿತಚಿಂತಕರಾಗಿದ್ದು, ಅವರ ಕಾರ್ಯಗಳು ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಡಾ. ಪ್ರವೀಣ್ ಪಿ ಬಾಗೇವಾಡಿ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ದೇವರಾಜ ಅರಸ್ ರವರ ಜನ್ಮ ದಿನಾಚರಣೆ ವೇಳೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳು ಕರ್ನಾಟಕದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಬಣ್ಣಿಸಿದರು.
ದೇವರಾಜ ಅರಸ್ ರವರು ಹಾವನೂರು ಆಯೋಗವನ್ನು ಸ್ಥಾಪಿಸಿ, ರಾಜ್ಯದ ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಮೀಸಲು ಒದಗಿಸಿದರು. ಈ ಆಯೋಗದ ಶಿಫಾರಸುಗಳು ಮುಂದೆ ಬಹುವಾಗಿ ಸಾಮಾಜಿಕ ನ್ಯಾಯಕ್ಕೆ ನಾಂದಿಯಾದವು ಎಂದು ತಿಳಿಸಿದರು.
ಉಳುವವನೇ ಭೂಮಿಯ ಒಡೆಯ ನೀತಿಯನ್ನು ಜಾರಿ ಮಾಡಿದರಿಂದ ಲಕ್ಷಾಂತರ ರೈತರಿಗೆ ಭೂಮಿ ಸಿಕ್ಕಿತು. ಜೀತ ವಿಮುಕ್ತಿ, ಋಣಪರಿಹಾರ ಕಾನೂನುಗಳ ಮೂಲಕ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತಂದುಕೊಟ್ಟರು. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಉಚಿತ ಊಟ ವ್ಯವಸ್ಥೆ, ಶುಲ್ಕ ರಿಯಾಯಿತಿ, ವಿದೇಶೀ ಶಿಕ್ಷಣ ಸಾಲ ಯೋಜನೆಗಳನ್ನು ಜಾರಿ ಮಾಡಿದರು.
ಅವರ ಆಡಳಿತಾವಧಿಯಲ್ಲಿ ಮಾಡಿದ ಕಾರ್ಯಗಳು ಹಿಂದುಳಿದ ವರ್ಗದ ಜನರ ರಾಜಕೀಯ, ಆರ್ಥಿಕ ಪ್ರಗತಿಗೆ ಕಾರಣವಾದವು ಹಾಗೂ ಸಾಮಾಜಿಕ ನ್ಯಾಯ ದೊರಕಿಸಿದವು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರಾದ ಹೆಚ್.ಎನ್. ಮಂಜುನಾಥ ಸ್ವಾಮಿ, ಸಹಾಯಕ ಯೋಜನಾ ಅಧಿಕಾರಿಗಳಾದ ಎಸ್. ವೆಂಕಟಚಲಪತಿ ಸೇರಿದಂತೆ ಜಿಲ್ಲಾ ಪಂಚಾಯತಿ ಸಿಬ್ಬಂದಿ ಹಾಜರಿದ್ದರು.


























