
ವಾಡಿ :ಡಿ.6: ವಿಪರೀತ ಹದಗೆಟ್ಟು ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದ ಕರದಾಳ-ಅಳೋಳ್ಳಿ ಮಾರ್ಗದ ರಸ್ತೆ ಕೊನೆಗೂ ಅಭಿವೃದ್ದಿ ಕಂಡಿದ್ದು ಡಾಂಬರು ರಸ್ತೆಯಾಗಿ ಮಾರ್ಪಟ್ಟಿದ್ದು ಗ್ರಾಮಸ್ಥರ ನೆಮ್ಮದಿ ಮರುಕಳಿಸಿದೆ.
2024-25ನೇ ಸಾಲಿನ ಕಲ್ಯಾಣ ಪಥ ಯೋಜನೆ ಅಡಿಯಲ್ಲಿ 2.76ಕೋಟಿ ವೆಚ್ಚದಲ್ಲಿ ಈ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಐದು ವರ್ಷ ನಿರ್ವಹಣೆ ಮತ್ತು ಮರು ಡಾಂಬರೀಕರಣ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಆದೇಶಿಸಲಾಗಿದೆ. 2.3ಕಿಮೀ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದ್ದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕಾಳಜಿಯಿಂದ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಡಾಂಬರು ಭಾಗ್ಯ ಕಲ್ಪಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಕರದಾಳ ಗ್ರಾಮದಿಂದ ಅಳೋಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಸಂಚಕಾರ ತಂದೊಡ್ಡಿತ್ತು. ಡಾಂಬಾರು ಸಂಪೂರ್ಣ ಕಿತ್ತು ಹೋಗಿ ಜಲ್ಲಿಕಲ್ಲು ಮೇಲೆ ತೇಲಿ ನಿಂತು ಸಂಚಾರ ದುಸ್ತಾರವಾಗಿತ್ತು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳು ಈ ಕಾಮಗಾರಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಕಾಲಕಾಲಕ್ಕೆ ತಪಾಸಣೆ ನಡೆಸಿ ಅತ್ಯುತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿರುವ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರನಿಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.































