
ಬೆಂಗಳೂರು, ಡಿ. ೩೦- ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಕನ್ನಡಿಗರಿಗೆ ಹಸ್ತಾಂತರಿಸಲು ನಿರ್ಮಿಸಲಾಗಿರುವ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡಲು ಮುಂದಾಗಿರುವ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ಕೊಡಲ್ಲ ಎಂದು ಗುಡುಗಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ಕನ್ನಡಿಗರಿಗೆ ಹಸ್ತಾಂತರಿಸಲು ನಿರ್ಮಿಸಿದ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ನಾವು ಇದಕ್ಕೆ ಅವಕಾಶ ಕೊಡಲ್ಲ. ಕನ್ನಡಿಗರ ಹಿತಾಸಕ್ತಿ ಬಲಿಕೊಡಲು ನಾವು ಬಿಡಲ್ಲ ಎಂದರು.
ಬೆಂಗಳೂರಿನ ಯಲಹಂಕದ ಕೋಗಿಲು ಬಳಿ ಸರ್ಕಾರಿ ಜಮೀನನಲ್ಲಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ರಾಜ್ಯ ಸರ್ಕಾರ ಏಕಾಏಕಿ ನೆಲಸಮ ಮಾಡಿದೆ. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಒತ್ತಡಕ್ಕೆ ಮಣಿದು ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳನ್ನು ಕೇರಳದ ವಲಸಿಗರಿಗೆ ಸರ್ಕಾರ ಮನೆ ಮಂಜೂರು ಮಾಡುತ್ತಿದೆ ಎಂದು ದೂರಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳು ಅರ್ಹರಿಗ ಸಿಗಬೇಕು. ಕನ್ನಡಗಿರಗೆ ಸಿಗಬೇಕಾದ ಮನೆಗಳು ಕೇರಳದ ಅಕ್ರಮ ವಲಸಿಗರಿಗೆ ನೀಡುತ್ತಿರುವುದು ಸರಿಯಲ್ಲ ಇದು ಕಾನೂನಿನ ವಿರುದ್ಧ ಕನ್ನಡಿಗರ ಆತ್ಮಗೌರವಕ್ಕೆ ಚ್ಯುತಿ ತರುವ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಮುಖ್ಯಮಂತ್ರಿ ಹುದ್ದೆಯನ್ನು ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಅತಂತ್ರ ಸ್ಥಿತಿಯಲ್ಲಿರುವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಈ ಇಬ್ಬರೂ ಬೈಯಪ್ಪನಹಳ್ಳಿ ಬಳಿ ಕೇರಳ ವಲಸಿಗರಿಗೆ ಮನೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ದೆಹಲಿಯಲ್ಲಿ ಕುಳಿತಿರುವ ಕೇರಳ ಮೂಲದ ವೇಣುಗೋಪಾಲ್ ನಿರ್ಧಾರ ಮಾಡುತ್ತಿದ್ದಾರೆ .ಇದು ಸರಿಯಲ್ಲ ಎಂದು ಅವರು ದೂಷಿಸಿದರು.
ಈ ಹಿಂದೆ ಕೇರಳದ ವಯನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ದಾಗ ರಾಜ್ಯ ಸರ್ಕಾರ ೧೦೦ ಮನೆಗಳನ್ನು ಕಟ್ಟಿಸಿಕೊಟ್ಟರು. ಆದರೆ, ಕರ್ನಾಟಕದಲ್ಲಿ ಪ್ರವಾಹದಿಂದ ಸಿಲುಕಿರುವ ರೈತರಿಗೆ ಪರಿಹಾರ ಕೇಳಿದರೆ ಕೇಂದ್ರ ಸರ್ಕಾರದತ್ತ ಮುಖ್ಯಮಂತ್ರಿ ಬೊಟ್ಟು ಮಾಡುತ್ತಾರೆ ಎಂದು ದೂರಿದ ಅವರು, ಕೇರಳದ ಅಕ್ರಮ ವಲಸಿಗರ ಬಗ್ಗೆ ಚಿಂತನೆ ಮಾಡುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಕನ್ನಡಿಗರ ಹೊಟ್ಟೆ ಹೊರೆಯುವ ಕೆಲಸ ಮಾಡುತ್ತಿರುವುದು ದುರ್ದೈವ ಎಂದರು.
ಕುಡುಕರ ರಾಜ್ಯ ಎಂದು ಘೋಷಿಸಿ
ಗ್ಯಾರಂಟಿ ಯೋಜನೆಗೆ ಹಣ ಕ್ರೂಢೀಕರಿಸಲು ಆಗದೆ ಕಾಂಗ್ರೆಸ್ ಸರ್ಕಾರ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಗುರಿಯನ್ನು ಶೇ. ೩೫ ರಷ್ಟು ಹೆಚ್ಚಿಸಿದೆ. ಸಣ್ಣ ಸಣ್ಣ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದೆ. ಈ ಮೂಲಕ ಕರ್ನಾಟಕವನ್ನು ಕುಡುಕರ ರಾಜ್ಯ ಮಾಡಲು ಹೊರಟಿದೆ. ಕಾಂಗ್ರೆಸ್ ಆರನೇ ಗ್ಯಾರಂಟಿಯಲ್ಲಿ ಕುಡುಕರ ರಾಜ್ಯವೆಂದು ಘೋಷಿಸಿ ಎಂದು ಅವರು ವ್ಯಂಗ್ಯವಾಡಿದರು.
ಗೃಹಲಕ್ಷ್ಮಿ ಯೋಜನೆಯ ಮಾರ್ಚ್ ತಿಂಗಳ ೨ ಕಂತಿನ ಹಣವಾದ ೫ ಸಾವಿರ ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಹಣ ಎಲ್ಲಿ ಹೋಯಿತು ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ:ಸಭೆ
ರಾಜ್ಯದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ. ಬರುವ ಜನವರಿ ೫ ರಂದು ಬೆಂಗಳೂರಿನಲ್ಲಿ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೋರಾಟದ ರೂಪುರೇಷೆಗೆ ಅಂತಿಮ ರೂಪ ನೀಡಲಾಗುವುದು ಎಂದರು.
ಜನವರಿ ೫ ರಂದು ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿ, ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡು ಹೋರಾಟದ ಸ್ವರೂಪವನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.

























