Home ಜಿಲ್ಲೆ ಎಸ್ಸೆಸ್ಸೆಲ್ಸಿಯಲ್ಲಿ ಯಾದಗಿರಿ ಜಿಲ್ಲೆಗೆ ಕೀರ್ತಿ ತಂದ ಪ್ರೇರಣಾ : ರಾಜ್ಯ ಮಟ್ಟದಲ್ಲಿ ೪ನೇ ರ‍್ಯಾಂಕ್

ಎಸ್ಸೆಸ್ಸೆಲ್ಸಿಯಲ್ಲಿ ಯಾದಗಿರಿ ಜಿಲ್ಲೆಗೆ ಕೀರ್ತಿ ತಂದ ಪ್ರೇರಣಾ : ರಾಜ್ಯ ಮಟ್ಟದಲ್ಲಿ ೪ನೇ ರ‍್ಯಾಂಕ್

ಯಾದಗಿರಿ :ಮೇ.೧೪: ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಗುರುಮಠಕಲ್ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿನಿ ಪ್ರೇರಣಾ ಅಪೂರ್ವ ಸಾಧನೆ ಮಾಡಿ ಯಾದಗಿರಿ ಜಿಲ್ಲೆಯ ಹೆಸರನ್ನು ರಾಜ್ಯ ಮಟ್ಟದಲ್ಲಿ ಪ್ರಖ್ಯಾತಿಗೊಳಿಸಿದ್ದಾಳೆ.

ಪಟ್ಟಣದ ಜಿ. ಶ್ರೀನಿವಾಸರೆಡ್ಡಿ ಮೆಮೋರಿಯಲ್ ಶಾಲೆ ವಿದ್ಯಾರ್ಥಿನಿಯಾಗಿರುವ ಪ್ರೇರಣಾ, ಒಟ್ಟು ೬೨೫ ಅಂಕಗಳಲ್ಲಿ ೬೨೨ ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ೪ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಜೊತೆಗೆ ಯಾದಗಿರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾಳೆ.

ಸಾಮಾನ್ಯ ಕುಟುಂಬದಿAದ ಬಂದಿರುವ ಪ್ರೇರಣಾ, ನಿರಂತರ ಪರಿಶ್ರಮ, ಶಿಸ್ತಿನ ಓದು ಹಾಗೂ ಗುರಿಯತ್ತದ ಅಚಲ ಸಂಕಲ್ಪದ ಮೂಲಕ ಈ ಸಾಧನೆ ಸಾಧಿಸಿದ್ದಾಳೆ. ಪ್ರತಿದಿನ ಯೋಜಿತವಾಗಿ ಅಧ್ಯಯನ ನಡೆಸುವುದು, ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಹಾಗೂ ಶಿಕ್ಷಕರ ಮಾರ್ಗದರ್ಶನವನ್ನು ಅಕ್ಷರಶಃ ಅನುಸರಿಸಿರುವುದು ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿಯ ಸಾಧನೆಗೆ ಪೋಷಕರ ಪ್ರೋತ್ಸಾಹವೂ ಮಹತ್ವದ ಪಾತ್ರವಹಿಸಿದ್ದು, ಕುಟುಂಬದ ಸಹಕಾರ ಅವಳ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ. ಫಲಿತಾಂಶ ಪ್ರಕಟವಾದ ಬಳಿಕ ಶಾಲೆಯಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದ್ದು, ಶಿಕ್ಷಕರು ಹಾಗೂ ಸಹಪಾಠಿಗಳು ಪ್ರೇರಣಾಳ ಸಾಧನೆಯನ್ನು ಕೊಂಡಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರೇರಣಾ, “ಯಶಸ್ಸಿಗೆ ನಿರಂತರ ಅಭ್ಯಾಸ, ಆತ್ಮವಿಶ್ವಾಸ ಮತ್ತು ಶ್ರಮ ಅಗತ್ಯ. ನನ್ನ ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ,” ಎಂದು ಸಂತಸ ವ್ಯಕ್ತಪಡಿಸಿದ್ದಾಳೆ.

ಪ್ರೇರಣಾಳ ಈ ಅಪೂರ್ವ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಸ್ಥಳೀಯ ಗಣ್ಯರು ಹಾಗೂ ಸಾರ್ವಜನಿಕರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ವಿದ್ಯಾರ್ಥಿನಿಗೆ ಶಾಲೆಯ ವತಿಯಿಂದ ಶೀಘ್ರದಲ್ಲೇ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.