
ಅಥಣಿ:ಡಿ.೩೦: ನಮ್ಮ ದೇಶದಲ್ಲಿ ಜನಿಸಿದ ಅನೇಕ ಸಂತ ಮಹಾತ್ಮರು ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯ ಮೂಲಕ ಜಗತ್ಪ್ರಸಿದ್ದಿ ಹೊಂದಿದ್ದಾರೆ. ಅವರ ಬದುಕಿನ ಆದರ್ಶಗಳೇ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿವೆ ಎಂದು ನದಿ ಇಂಗಳಗಾವದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಮೋಟಗಿ ಮಠದ ಲಿಂಗೈಕ್ಯ ಚನ್ನಬಸವ ಶಿವಯೋಗಿಗಳ ೧೦೧ನೇ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೋಟಗಿಮಠದ ಗುರು ಪರಂಪರೆಯಲ್ಲಿ ಚನ್ನಬಸವ ಶಿವಯೋಗಿಗಳು ಮತ್ತು ಮುರುಘೇಂದ್ರ ಶಿವಯೋಗಿಗಳು ತಮ್ಮ ಬದುಕಿನಲ್ಲಿ ಮಾಡಿದ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳು ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಅವರ ಸ್ಮರಣೆಯ ಜೊತೆಗೆ ಆಧ್ಯಾತ್ಮಿಕ ಪ್ರವಚನ ಆಲಿಸುವುದರಿಂದ ನಮ್ಮೆಲ್ಲರ ಬದುಕು ಸುಂದರವಾಗುತ್ತದೆ. ಸತ್ಕರ್ಮಗಳನ್ನು ಮಾಡುವ ಮೂಲಕ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮಹಾತ್ಮರ ಚರಿತ್ರೆಗಳನ್ನು ಆಲಿಸುವುದರಿಂದ ನಮ್ಮ ಬದುಕಿನಲ್ಲಿ ಆಗಿರುವ ತಪ್ಪುಗಳನ್ನು ಒಪ್ಪಿಕೊಂಡು ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ ಅಥಣಿಯ ಮೋಟಗಿಮಠವು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ, ಇಲ್ಲಿ ಬಸವ ಸಂಸ್ಕೃತಿಯ ಉತ್ಸವದ ಜೊತೆಗೆ ಕನ್ನಡ ನಾಡು-ನುಡಿ ಸಾಹಿತ್ಯ – ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ ಪರಂಪರೆಯಾಗಿದೆ. ಬಸವ ಸಂಸ್ಕೃತಿ ಮೇಳ -೨೦೨೬ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀಮಠದ ಗುರು ಪರಂಪರೆಯ ಲಿಂ. ಚೆನ್ನಬಸವ ಶಿವಯೋಗಿಗಳ ಸ್ಮರಣೋತ್ತರ ಅಂಗವಾಗಿ ಬಸವ ಸಂಸ್ಕೃತಿ ಪ್ರವಚನ ಜರುಗಲಿದೆ. ಸದ್ಭಕ್ತರು ಪ್ರತಿ ದಿನ ಸಾಯಂಕಾಲ ೬:೩೦ಕ್ಕೆ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶೆಟ್ಟರ ಮಠದ ಮರಳಸಿದ್ಧ ಸ್ವಾಮೀಜಿ, ಯೋಗಿರಾಜೇಂದ್ರ ಶಾಸ್ತ್ರಿಗಳು ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಹಿರಿಯರಾದ ಮುರಿಗೆಪ್ಪ ತೊದಲಬಾಗಿ, ಶಂಕರ ಹಗಲoಬಿ, ಮುರಿಗೆಪ್ಪ ಮಮದಾಪುರ, ರಮೇಶ ಕಾಗಲೆ, ವೈಶಾಲಿ ಮಠಪತಿ, ಸುನೀತಾ ಮೆಣಸಿ, ಶಿವಲೀಲಾ ಪಟ್ಟಣಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಎಂ.ಡಿ. ತೊದಲಬಾಗಿ ಸ್ವಾಗತಿಸಿದರು. ಶಶಿಧರ ಬರ್ಲಿ ನಿರೂಪಿಸಿದರು. ವೈಶಾಲಿ ಮಠಪತಿ ವoದಿಸಿದರು.























