
ಕಲಬುರಗಿ :ಜ.23: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪಾತ್ರ ಅತ್ಯಂತ ಮಹತ್ವದ್ದು ಮತ್ತು ಸ್ಮರಣೀಯ. ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟದ ಜೊತೆಗೆ, ಸಶಸ್ತ್ರ ಹೋರಾಟದ ಮೂಲಕವೇ ಭಾರತಕ್ಕೆ ಶೀಘ್ರ ಸ್ವಾತಂತ್ರ್ಯ ತರಬಹುದೆಂದು ನಂಬಿದ್ದ ಕ್ರಾಂತಿಕಾರಿ ನಾಯಕರವರು. ಇಂದಿನ ಯುವಶಕ್ತಿ ನೇತಾಜಿಯವರ ದೇಶಪ್ರೇಮ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸದಸ್ಯ ಕಾಶಿನಾಥ ಮಂದೇವಾಲ್ ಹೇಳಿದರು. ಜೇವರ್ಗಿ ಪಟ್ಟಣದ ಕೋರ್ಟ್ ಸಮೀಪದ ‘ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ’ಯಲ್ಲಿ ಕಲಬುರಗಿಯ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 129ನೇ ಜನ್ಮದಿನ-ಪರಾಕ್ರಮ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು. ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳು ಮಹತ್ತರವಾಗಿವೆ. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ, ಭಾರತೀಯ ರಾಷ್ಟ್ರೀಯ ಸೇನೆಯ ರಚನೆ, “ಆಜಾದ್ ಹಿಂದ್ ಸರ್ಕಾರ” ಸ್ಥಾಪನೆ, “ಜೈ ಹಿಂದ್” ಮತ್ತು “ದೆಹಲಿ ಚಲೋ” ಘೋಷಣೆಗಳ ಮೂಲಕ ಯುವಜನರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿ, ಸ್ವಾತಂತ್ರ್ಯದ ಕನಸನ್ನು ಜೀವಂತವಿಟ್ಟರು. ಗಾಂಧೀಜಿಯವರ ಅಹಿಂಸೆ ಮಾರ್ಗಕ್ಕಿಂತ ಶಸ್ತ್ರಾಸ್ತ್ರ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆಯಲು ಪ್ರಯತ್ನಿಸಿ, ಭಾರತದ ಹೋರಾಟದ ದಿಕ್ಕನ್ನೇ ಬದಲಿಸಿದರು ಎಂದರು.
ಶಿಕ್ಷಕ ಮಲ್ಲಿಕಾರ್ಜುನ ಎಸ್.ಸುಲೇಪೇಟ್ ಅವರು ನೇತಾಜಿಯವರ ಬಗ್ಗೆ ಸ್ವರಚಿಯ ಕವನವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ. ಶಿಕ್ಷಕರಾದ ಶ್ರೀಶೈಲ ಡಿ.ಮೈಂದರ್ಗಿ, ಅಶೋಕ ಅವಂಟಿ, ಗೀತಾ ಜಿ., ಕೋತಲಪ್ಪ ಚಾವರ್, ಶಂಕರ ಸುರಗಳ್ಳಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






















