ವಿಜಯಪುರದಲ್ಲಿ ಮತ್ತೆ ಭೂಮಿ ಗಢಗಢ

ವಿಜಯಪುರ, ನ. 4:ಮಂಗಳವಾರ ಬೆಳಿಗ್ಗೆ ಭೂಮಿ ಕಂಪಿಸಿ ವಿಜಯಪುರ ನಗರದ ಜನ ಗಢಗಢ ಶಬ್ದಕ್ಕೆ ನಡುಗಿ ಬೆಚ್ಚಿಬಿದ್ದರು.
ಹೌದು. ಬೆಳಿಗ್ಗೆ 7.49ಕ್ಕೆ ಭೂಮಿ ಕಂಪಿಸಿ ಜನರು ಬೆಚ್ಚಿಬಿದ್ದರು. ಕೆಲವರು ಭೂಮಿಯ ಕಂಪನಕ್ಕೆ ಹೆದರಿ ಮನೆಯಿಂದ ಓಡಿ ಹೊರಗೆ ಬಂದರು.
ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲಾಗಿದೆ.
ಆಗಷ್ಟೇ ನಿದ್ರೆ ಮಂಪರ್ ನಿಂದ ಎದ್ದು ಜನರು ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಹೊತ್ತಿನಲ್ಲಿ ಭೂಕಂಪನ ಅನುಭವವಾಗಿ ಜನರು ಒಂದು ಕ್ಷಣ ಹೆದರಿದರು. ಮನೆಯಲ್ಲಿನ ಪಾತ್ರೆಗಳು ಎಂದು ಸದ್ದು ಮಾಡಿದವು. ಆಗ ಜನರು ಭೂಕಂಪನಾಗುತ್ತಿದೆ ಎಂದು ಮನೆಯಿಂದ ಹೊರಗೆ ಓಡಿ ಬಂದು ನೆರೆಹೊರೆಯರವನ್ನು ಎಚ್ಚರಿಸಿದರು.
ವಿಜಯಪುರದ ಇಬ್ರಾಹಿಂಪುರ, ಗಣೇಶನಗರ, ಕೀರ್ತಿ ನಗರ ಮತ್ತಿತರ ಕಡೆಗಳಲ್ಲಿ ಬೆಳ್ಳಂ ಬೆಳಿಗ್ಗೆ ಭೂಕಂಪನದ ಅನುಭವವನ್ನು ಜನರು ಅನುಭವಿಸಿ ಪರಸ್ಪರರು ತಮಗಾದ ಅನುಭವ ಹಂಚಿಕೊಂಡರು.
ಕಳೆದ ಎರಡು ತಿಂಗಳಿಂದ ಸುಮಾರು 10-12 ಬಾರಿ ಜಿಲ್ಲೆಯ ಹಲವು ಭಾಗಗಳಲ್ಲಿ ಭೂಕಂಪನ ಮರುಕಳಿಸುತ್ತಿದೆ. ಇದರಿಂದ ಜನರು ಆತಂಕದಿಂದ ಹೊರಬರದಂತಾಗಿದೆ.
ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಿ ಪದೇ ಪದೇ ಭೂಕಂಪನವಾಗಲು ಕಾರಣವೇನು ಎಂಬುವುದನ್ನು ಪತ್ತೆ ಹಚ್ಚಬೇಕು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜನರು ಮನವಿ ಮಾಡಿದ್ದಾರೆ.