
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೨೩:ಜನಪದ ಸಾಹಿತ್ಯ ಅತ್ಯಂತ ಪ್ರಾಚೀನವಾದ ವಿಶಿಷ್ಟ ಸಾಹಿತ್ಯವಾಗಿದ್ದು, ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ. ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳಿವೆ, ನೈತಿಕತೆ ಇದೆ. ಇನ್ನೂ ವಿಶೇಷವಾಗಿ ಈ ಸಾಹಿತ್ಯದಲ್ಲಿ ನಮ್ಮೆಲ್ಲರ ಬದುಕಿಗೆ ಬೇಕಾದ ಪಾಠ ಅಡಕವಾಗಿದೆ ಎಂದು ಸಿಂದಗಿಯ ಹಿರಿಯ ಜಾನಪದ ವಿದ್ವಾಂಸ ಪ್ರೊ. ಬಿ.ಎನ್. ಪಾಟೀಲ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಶ್ರೀ ಮಡಿವಾಳಪ್ಪ ತುಳಜಪ್ಪ ಸಾಸನೂರ ದತ್ತಿ. ದತ್ತಿ ದಾನಿಗಳು ಡಾ. ಅಶೋಕ ಸಾಸನೂರ. ವಿಷಯ: ಜಾನಪದ ಸಾಹಿತ್ಯದ ಪ್ರಸ್ತುತ ಮಹತ್ವ ಹಾಗೂ ಲಿಂ. ರಾಜೇಶ್ವರಿ ಸಿದ್ಧಯ್ಯ ಕಪೂ೯ರಮಠ ದತ್ತಿ. ದತ್ತಿ ದಾನಿಗಳು ಡಾ. ಮಹೇಶ ಸಿದ್ಧಯ್ಯ ಕಪೂ೯ರಮಠ. ವಿಷಯ: ಜಾನಪದ ಸಾಹಿತ್ಯದಲ್ಲಿ ಗರತಿ ಎಂಬ ವಿಶೇಷ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯಕ್ಕೆ ವಿಜಯಪುರ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಹಲಸಂಗಿ ಗೆಳೆಯರ ಬಳಗದ ಕೊಡುಗೆ ಅಪಾರ. ಹೀಗಾಗಿಯೇ ಇಂದು ಜಾನಪದ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೇತನಾ ಶಿಕ್ಷಣ ಸಂಸ್ಥೆಯ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯ ಅಡಿವೇಶ ಕೊಳಮಲಿ ಮಾತನಾಡಿ, ಜಾನಪದ ಸಾಹಿತ್ಯದ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದು ಎನ್ನುತ್ತ “ಕೋಣೆಯ ಶಿಶು ಕೊಳೆಯಿತು, ಓಣಿಯ ಶಿಶು ಬೆಳೆಯಿತು” ಎಂಬ ಗಾದೆ ಮಕ್ಕಳ ಬೆಳವಣಿಗೆಯನ್ನು ಹೇಳುತ್ತದೆ. ಜಾನಪದ ಸಾಹಿತ್ಯ ಜೀವನ ಮೌಲ್ಯಗಳನ್ನು ಕಲಿಸಿ ಕೊಡುತ್ತದೆ. ಇಂದಿನ ಯುವಪೀಳಿಗೆ ಜಾನಪದ ಸಾಹಿತ್ಯದ ಕುರಿತು ಹೆಚ್ಚು ಹೆಚ್ಚು ಅಧ್ಯಯನ ಮಾಡಬೇಕು. ಜಾನಪದ ಗೀತೆ, ಗಾದೆ, ಒಗಟುಗಳನ್ನು ಸಂಗ್ರಹಿಸುವ ಕಾರ್ಯ ಇಂದು ಯುವ ಮಿತ್ರರಿಂದ ಆಗಬೇಕು ಎಂದರು.
“ಜಾನಪದ ಸಾಹಿತ್ಯದ ಪ್ರಸ್ತುತ ಮಹತ್ವ” ಕುರಿತು ಉಪನ್ಯಾಸ ನೀಡಿದ ಬಸವನ ಬಾಗೇವಾಡಿ ತಾಲೂಕಾ ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವೇಂದ್ರ ಗೋನಾಳ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಸಾಯುವವರೆಗೆ ಕ್ರಿಯಾಶೀಲವಾಗಿರುವ ಸಾಹಿತ್ಯವೆಂದರೆ ಜಾನಪದ ಸಾಹಿತ್ಯ. ಜಗತ್ತಿನ ಎಲ್ಲ ಸಾಹಿತ್ಯದ ಮೂಲ ಜಾನಪದ ಸಾಹಿತ್ಯದಲ್ಲಿ ಅಡಗಿದೆ. ಜನಪದ ನಮ್ಮ ಸಂಸ್ಕೃತಿಯ ತವರೂರು. ಜಾನಪದ ಸಾಹಿತ್ಯದ ಮೂಲಕ ಇಂದು ನಾವೆಲ್ಲರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
“ಜಾನಪದ ಸಾಹಿತ್ಯದಲ್ಲಿ ಗರತಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅಜು೯ಣಗಿ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕಿ ಡಾ.ಸವಿತಾ ಝಳಕಿ ಮಾತನಾಡಿ, ಶಿಷ್ಟ ಸಾಹಿತ್ಯದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನಕ್ಕಿಂತ ಜನಪದ ಸಾಹಿತ್ಯದಲ್ಲಿ ನೋಡುವ ದೃಷ್ಟಿಕೋನ ಅತ್ಯಂತ ವಿಶಿಷ್ಟವಾದದ್ದು ಎಂಬುದು ಜನಪದ ಚಿಂತಕರ ಅಭಿಪ್ರಾಯ ಎನ್ನುತ್ತ, ಗರತಿಯರು ಜನಪದ ಸಾಹಿತ್ಯದ ಅವಿಭಾಜ್ಯ ಅಂಗವಾಗಿದ್ದು, ಅವರ ಹಾಡುಗಳು ಮತ್ತು ಕಥೆಗಳು ಸಮುದಾಯದ ಸಂಸ್ಕೃತಿ, ನಂಬಿಕೆಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ ಎನ್ನುತ್ತ ಅನೇಕ ಜನಪದ ಕಥೆಗಳ, ಕಥನ ಕವನಗಳ ದೃಷ್ಟಾಂತಗಳನ್ನು ನೀಡುತ್ತ ಮಾಮಿ೯ಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ ಎಂ.ಬಿ. ಮಮದಾಪೂರ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವಿಶ್ರಾಂತ ವ್ಯವಸ್ಥಾಪಕ ಜಿ.ಡಿ. ಮಲ್ಲಿಗವಾಡ, ಮಾಜಿ ಸೈನಿಕ ಸಿದ್ರಾಮ ಬೀಳಗಿ, ಸಿಂಧೂ ಜಾಧವ ಉಪಸ್ಥಿತರಿದ್ದು ಮಾತನಾಡಿದರು.
ಶಿಲ್ಪಾ ಭಸ್ಮೆ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ನಿರೂಪಿಸಿದರು. ಮಮತಾ ಮುಳಸಾವಳಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ವಿಜಯಲಕ್ಷ್ಮಿ ಹಳಕಟ್ಟಿ, ಭಾಗೀರಥಿ ಸಿಂಧೆ, ಸುಖದೇವಿ ಅಲಬಾಳಮಠ, ಜಿ.ಎಸ್ ಬಳ್ಳೂರ, ವೈ.ಎಚ್.ಲಂಬೂ, ಎನ್ ಆರ್ ಕುಲಕರ್ಣಿ, ಎಸ್.ಎಂ.ಕಣಬೂರ, ವಿ.ಎಸ್ ಖಾಡೆ, ಶ್ರೀಕಾಂತ ನಾಡಗೌಡ, ಶಿವಾನಂದ ಬಸೆಟ್ಟಿ, ಯಶಸ್ ಮಿರಜಕರ, ಬಿ.ಪಿ. ಖಂಡೇಕಾರ, ಭಾಗ್ಯಶ್ರೀ ಪಾಟೀಲ, ಶಿವಾನಂದಗೌಡ ಪಾಟೀಲ, ಅಮೋಘಸಿದ್ಧ ಪೂಜಾರ, ಟಿ.ಆರ್ ಹಾವಿನಾಳ, ಕೆ.ಎಸ್ ಹಣಮಾಣಿ, ಸಿದ್ಧಲಿಂಗ ಶೆಟ್ಟೆಣ್ಣವರ, ಎನ್.ಎಂ. ಹರನಾಳ, ಎಂ.ಎನ್. ನಂದ್ಯಾಳ, ಬಿ.ವಿ ಪಟ್ಟಣಶೆಟ್ಟಿ, ಅಹಮ್ಮದ ವಾಲೀಕಾರ, ಲತಾ ಗುಂಡಿ, ಗಂಗಮ್ಮ ರಡ್ಡಿ, ಶಾಂತಾ ವಿಭೂತಿ , ತೇಜಸ್ವಿನಿ ವಾಂಗಿ, ಎನ್.ಕೆ.ಕುಂಬಾರ, ಎಸ್.ಎಸ್ ಮಾನೆ, ರಾಹುಲ್ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.