
ಯಾದಗಿರಿ:ಫೆ.೧೧:ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ದೈಹಿಕ-ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಓದಿನ ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ ತೋರಿಸಿ ಸಾಧನೆಗೈಯಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಯುವಕರಿಗೆ ಕಿವಿಮಾತು ಹೇಳಿದರು.
ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ಖೋ-ಖೋ ಇಂಡಿಯಾ ಕರ್ನಾಟಕ ಅಮೆಚೂರ್ ಅಸೋಸಿಯೇಷನ್ (ರಿ) ಬೆಂಗಳೂರು ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಖೋ-ಖೋ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಜಯಿಸಿದ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ (ಕೆ) ಗ್ರಾಮದ ಪ್ರತಿಭಾವಂತ ಕ್ರೀಡಾಪಟು ಚಂದ್ರಶೇಖರ ಅವರಿಗೆ ಮುದ್ನಾಳ ಗ್ರಾಮದಲ್ಲಿ ಅಖಿಲ ಭಾರತೀಯ ಕೋಲಿ ಸಮಾಜದ ವತಿಯಿಂದ ಭರ್ಜರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಉಮೇಶ್ ಮುದ್ನಾಳ ಅವರು, ಗ್ರಾಮೀಣ ಪ್ರದೇಶದ ಬಡ ಕುಟುಂಬದಿAದ ಬಂದಿರುವ ಚಂದ್ರಶೇಖರ ಅವರು ಬಡತನದ ನಡುವೆಯೇ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಆಟವಾಡಿ ತಂಡದ ಜಯಕ್ಕೆ ಪ್ರಮುಖ ಪಾತ್ರವಹಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಚಂದ್ರಶೇಖರ ಅವರ ಸಾಧನೆ ರಾಜ್ಯಕ್ಕೆ ಕೀರ್ತಿ ತಂದಿರುವುದಲ್ಲದೆ, ಯಾದಗಿರಿ ಜಿಲ್ಲೆಗೆ ಗೌರವ ಹೆಚ್ಚಿಸಿದೆ. ಇಂತಹ ಗ್ರಾಮೀಣ ಪ್ರತಿಭೆಗಳನ್ನು ಸರ್ಕಾರ ಗುರುತಿಸಿ ಸೂಕ್ತ ಪ್ರೋತ್ಸಾಹ, ತರಬೇತಿ ಸೌಲಭ್ಯ, ಉದ್ಯೋಗಾವಕಾಶ ನೀಡಿದರೆ ಇನ್ನಷ್ಟು ಕ್ರೀಡಾಪಟುಗಳು ಹೊರಹೊಮ್ಮಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪವನ್ ಕೆ. ಮುದ್ನಾಳ, ಶಿವು ಗೋಗಿ, ಅಡಿವೆಪ್ಪ ಗೋಗಿ, ಮಲ್ಲು ದಿಗ್ಗಿ ಸೇರಿದಂತೆ ಅನೇಕ ಕ್ರೀಡಾಭಿಮಾನಿಗಳು, ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು



























