ಸರ್ಕಾರ ನಮಗಿಂತಲೂ ಹೆಚ್ಚು ಅಂಗವಿಕಲವಾಗಿದೆ: ಅಂಬಾಜಿ ಮೇಟಿ

ಕಲಬುರಗಿ:ಮೇ.೨೦:ತಳವಾರ ಸಮಾಜದವರು ಸಾಂವಿಧಾನಿಕ ಮತ್ತು ಕಾನೂನು ಬದ್ಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದೇವೆ ಎಂದು ೪೫ ಡಿಗ್ರಿ ಸೆಲ್ಸಿ ಬೀರು ಬಿಸಿಲಿನಲ್ಲಿ ೧೫೦ ಕಿಲೋಮೀಟರ್ ೧೫ ದಿನಗಳ ಕಾಲ ಪಾದಯಾತ್ರೆ ಬಂದು ಪ್ರಾದೇಶಿ ಆಯುಕ್ತರಿಗೆ ಮನವಿ ಸಲ್ಲಿಸಿ ಧರಣಿ ಸತ್ಯಾಗ್ರಹ ಕುಳಿತು ೧೨ ದಿನಗಳು ಕಳೆದರೂ ಇಲ್ಲಿಯವರೆಗೆ ಬಂದು ಏನಾಗಿದೆ ಎಂಬುವುದು ಕಣ್ಣು ಬಿಟ್ಟು ನೋಡಿ ಸಮಸ್ಯೆ ಕೇಳುತ್ತಿಲ್ಲವೆಂದರೆ ಸರ್ಕಾರ, ಅಧಿಕಾರಿಗಳು ಕಣ್ಣು ಕಾಲು ಬಾಯಿ ಕಳೆದುಕೊಂಡು ನಮಗಿಂತ ಹೆಚ್ಚು ಅಂಗ ವಿಕಲವಾಗಿದೆ ಎಂದು ನವ ಕರ್ನಾಟಕಎಂಆರ್ ಡಬ್ಲ್ಯೂ, ಯುಆರ್ ಬ್ಲ್ಯೂ, ವಿಆರ್ ಡಬ್ಲ್ಯೂ, ವಿಕಲ ಚೇತನರ ಗೌರವ ಧನ ಕಾರ್ಯಕರ್ತರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಂಭಾಜಿ ಮೇಟಿ ಹೇಳಿದರು.
ಕಲಬುರ್ಗಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕರ್ನಾಟಕ ರಾಜ್ಯ ತಳವಾರ ಸಮಾಜ ಸಂಘಟನೆ ಹಮ್ಮಿಕೊಂಡಿರುವ ೧೨ದಿನದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಕ್ಕೆ ಬೆಂಬಲ ನೀಡಿ ಮಾತನಾಡಿದ ಅವರು,
ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯ ಮಾಡುತ್ತಲೇ ಇದೆ. ಉಚಿತವಾಗಿ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ ರೂ. ೨೦೦೦ ನೀಡುತ್ತಿದ್ದೇವೆ ಎಂದು ವೃದ್ಧರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, ನೀಡುತ್ತಿರುವ ಮಾಶಾಸನ ಸ್ಥಗಿತಗೊಳಿಸಿದೆ. ಅದು ಕೂಡ ಸಕಾಲಕ್ಕೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಪಂಚ ಗ್ಯಾರಂಟಿಯ ಯೋಜನೆಗಳ ಹೆಸರ ಮೇಲೆ ಪ್ರತಿಯೊಂದರ ಬೆಲೆ ಹೆಚ್ಚಿಗೆ ಮಾಡಿ ಸಾರ್ವಜನಿಕರ ಜೇಬಿನಿಂದ ಹಾಡಗಲೇ ಹಣ ಲೂಟಿ ಮಾಡುವ ಮೂಲಕ ದರೋಡೆಗೆ ಇಳಿದಿದೆ. ಇದನ್ನೇ ನಮ್ಮ ಸರ್ಕಾರದ ಅಭಿವೃದ್ಧಿಯ ಕೆಲಸವೆಂದು ದೊಡ್ಡ ಸಾಧನೆ ಮಾಡಿದವರಂತೆ ಮುಖ್ಯಮಂತ್ರಿ ಆದಿಯಾಗಿ ಸಚಿವರೆಲ್ಲಾ ಹೇಳಿಕೊಳ್ಳುತ್ತಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದರಂತೆ ಅಧಿಕಾರದ ಆಸೆಗಾಗಿ ತಳವಾರ ವಿಷಯದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ನಾನು ಇಲ್ಲಿ ಇಟ್ಟಿರುವ ಎಲ್ಲಾ ದಾಖಲಾತಿಗಳನ್ನು ನೋಡಿದ್ದೇನೆ ಇದು ಬಹಳ ಸ್ಪಷ್ಟ ಮತ್ತು ನ್ಯಾಯ ಸಮ್ಮತವಾಗಿದೆ. ಇದರಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಯಾವುದೇ ರಾಜಕೀಯ ಮಾಡದೆ, ಇವರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕನ್ನು ನೀಡಲೇಬೇಕು. ನಮ್ಮ ಸಂಘಟನೆಯ ವತಿಯಿಂದ ತಳವಾರ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮತ್ತು ಉಸ್ತುವಾರಿ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಒಂದು ವೇಳೆ ಕೊಡದೆ ಹೋದಲ್ಲಿ ವಿಧಾನಸೌಧ ಅಥವಾ ಉಸ್ತುವಾರಿ ಮಂತ್ರಿಗಳ ಮನೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ, ಹಿರಿಯರಾದ ಈರಣ್ಣ ಡಾಂಗೆ ಪ್ರೇಮ ಕೋಲಿ, ರಾಮು ಉಮ್ಮರಗಿ, ನವ ಕರ್ನಾಟಕ ವಿಕಲಚೇತನರ ಒಕ್ಕೂಟ ಪದಾಧಿಕಾರಿಗಳಾದ ರಾಜ್ಯ ಖಾಜಾಂಚಿ ರಾಜೇಂದ್ರ ಕಮಕ್ನೂರ, ಕಲಬುರಗಿ ಜಿಲ್ಲಾಧ್ಯಕ್ಷರಾದ ಸಿದ್ಧಾರೂಢ ಎಂ. ಬಿರಾದಾರ, ನಾಗರಾಜ ನಾಟಿಕಾರ ನಂದೂರ, ಶರಣು ಹತ್ತರಕಿ, ಜೇವರ್ಗಿ ತಾಲ್ಲೂಕ ಅಧ್ಯಕ್ಷರಾದ ನಿಂಗಣ್ಣ ಮಯೂರ, ಸಾಯಬಣ್ಣ ಜಮಾದಾರ ಕೌವಲಗಾ, ಸುರೇಶ ಎಸ್. ಹರವಾಳ,
ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಮ್ಮ ಜಮಾದಾರ ಹಡಗಿಲಹಾರುತಿ, ಕಾಶಮ್ಮ ಪೂಜಾರಿ ಭೀಮಳ್ಳಿ, ಸಾವಿತ್ರಿ ಮಾನೆ ಕಡಣಿ, ಶೋಭಾ ಜಮಾದಾರ ಸರಡಗಿ, ನಾಗಮ್ಮ ಸಂತೋಷ ಅಂಬಲಗಾ, ಸೇರಿದಂತೆ ಹಲವಾರು ವಿಕಲಚೇತನರ ಉಪಸ್ಥಿತರು ಇದ್ದರು.