Home ಜಿಲ್ಲೆ ಬೆಂಗಳೂರು ಪೈಪಾಳ್ಯದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಚೆಟ್ಲು ಪರಷೆ ವೈಭವ

ಪೈಪಾಳ್ಯದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಚೆಟ್ಲು ಪರಷೆ ವೈಭವ

ಭಾಗ್ಯನಗರ.ಮಾ೯: ಬಾಗೇಪಲ್ಲಿ ತಾಲ್ಲೂಕಿನ ಪೈಪಾಳ್ಯ ಗ್ರಾಮದಲ್ಲಿ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವಾರ್ಷಿಕ ಚೆಟ್ಲು ಪರಷೆ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನೆರವೇರಿತು. ಧಾರ್ಮಿಕ ಸಂಭ್ರಮದ ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕರೂ ಹಾಗೂ ಬಿಜೆಪಿ ಮುಖಂಡರೂ ಆದ ಗುಂಜೂರು ಆರ್. ಶ್ರೀನಿವಾಸರೆಡ್ಡಿ ಭಾಗವಹಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.


ಕಾರ್ಯಕ್ರಮದ ಅಂಗವಾಗಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.

ದೇವಾಲಯವನ್ನು ಹೂವಿನ ಅಲಂಕಾರದಿಂದ ಸಿಂಗರಿಸಲಾಗಿದ್ದು, ಭಕ್ತರು ದೇವರ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪೈಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಭಕ್ತರು ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಗುಂಜೂರು ಆರ್. ಶ್ರೀನಿವಾಸರೆಡ್ಡಿ, ಪೈಪಾಳ್ಯ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ.


ಇಂತಹ ಧಾರ್ಮಿಕ ಉತ್ಸವಗಳು ಗ್ರಾಮೀಣ ಭಾಗದಲ್ಲಿ ಸಂಸ್ಕೃತಿ, ಪರಂಪರೆ ಮತ್ತು ಒಗ್ಗಟ್ಟನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ದೇವಾಲಯಗಳ ಸುತ್ತಮುತ್ತ ನಡೆಯುವ ಇಂತಹ ಕಾರ್ಯಕ್ರಮಗಳು ಜನರ ನಡುವೆ ಸಹೋದರತ್ವ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತವೆ ಎಂದರು.


ಇನ್ನೂ ಅವರು, ನಮ್ಮ ಪೂರ್ವಜರು ಉಳಿಸಿ ಬೆಳೆಸಿದ ಧಾರ್ಮಿಕ ಆಚರಣೆಗಳು ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಾಪಾಡಿ ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಧಾರ್ಮಿಕ ಉತ್ಸವಗಳು ಜನರನ್ನು ಒಂದಾಗಿ ಸೇರಿಸುವ ಕಾರ್ಯ ಮಾಡುತ್ತವೆ ಎಂದು ತಿಳಿಸಿದರು.


ಚೆಟ್ಲು ಪರಷೆ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಮುಖಂಡರು, ದೇವಾಲಯದ ಸಮಿತಿ ಸದಸ್ಯರು, ಯುವಕರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.


ಸ್ಥಳೀಯ ಮುಖಂಡರಾದ ಆನಂದರೆಡ್ಡಿ, ಮುರಳಿ, ಲಕ್ಷ್ಮೀ ನರಸಿಂಹಪ್ಪ, ಪ್ರಭಾಕರ, ಜೂಲಪಾಳ್ಯ ಮೂರ್ತಿ, ಚಿನ್ನಪ್ಪಯ್ಯ, ನರಸಿಂಹರೆಡ್ಡಿ, ಬೈರೆಡ್ಡಿ, ಚಿನಪರೆಡ್ಡಿ, ಕುಂಟ್ಲಪಲ್ಲಿ ಮೂರ್ತಿ, ವೆಂಕಟರವಣಸ್ವಾಮಿ, ಚೇಳೂರು ಸುಬ್ಬರೆಡ್ಡಿ, ಸುಧಾಕರ್, ಸೇರಿದಂತೆ ಹಲವರು ಹಾಜರಿದ್ದರು.